ಬೆಂಗಳೂರು: ಮಾಸ್ತಿ ಗುಡಿ ಸಿನಿಮಾ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ವೇಳೆ ದುರಂತಕ್ಕೀಡಾಗಿ ಸಾವನ್ನಪ್ಪಿದ ಖಳನಟ ಉದಯ್ ತಿಥಿ ಕಾರ್ಯಗಳನ್ನು ಕುಟುಂಬಸ್ಥರು ತಿಪ್ಪೆಗೊಂಡನ ಹಳ್ಳಿ ಕೆರೆ ದಂಡೆಯಲ್ಲಿ ನೆರವೇರಿಸಿದರು.
ಜಲಾಶಯದ ಬಳಿ ಉದಯ್ ಸಹೋದರಿಯರು, ಬಾವ, ಸ್ನೇಹಿತರು ಹಾಗೂ ಕುಟುಂಬಸ್ಥರು ಕಾರ್ಯದಲ್ಲಿ ಭಾಗಿಯಾಗಿದ್ದರು. ಇದೇ ಸ್ಥಳದಲ್ಲಿ ಉದಯ್ ಮೃತಪಟ್ಟಿದ್ದರಿಂದ ಇಲ್ಲಿಯೇ ತಿಥಿ ಕಾರ್ಯ ಮಾಡಿದ್ದೇವೆ ಎಂದು ಉದಯ್ ಬಾವ ಮುನಿರಾಜ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಉದಯ್ ಮೃತಪಟ್ಟ ಮೇಲೆ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಸರ್ಕಾರದಿಂದಾಗಲೀ, ಚಿತ್ರ ತಂಡದವರಿಂದಾಗಲೀ ಇದುವರೆಗೆ ಯಾವುದೇ ಪರಿಹಾರ ಹಣ ಸಿಕ್ಕಿಲ್ಲ. ಡೇಂಜರ್ ಜೋನ್ ಎಂಬ ಚಿತ್ರ ತಂಡದ ವತಿಯಿಂದ 50 ಸಾವಿರ ರೂ. ಸಿಕ್ಕಿದೆಯಷ್ಟೆ. ಬೇರೆ ಯಾರೂ ನಮ್ಮ ನೆರವಿಗೆ ಬಂದಿಲ್ಲ ಎಂದಿದ್ದಾರೆ.
ಇದೇ ವೇಳೆ ಖಳನಟರ ಸಾವಿಗೆ ಕಾರಣವಾಗುವಂತಹ ಸಾಹಸ ನಿರ್ದೇಶಿಸಿದ್ದ ರವಿ ವರ್ಮಾ ಮತ್ತು ನಾಗಶೇಖರ್ ಸೇರಿದಂತೆ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಜೆಎಂಎಫ್ ಸಿ ನ್ಯಾಯಾಲಯ ವಿಸ್ತರಿಸಿದೆ. ಸದ್ಯಕ್ಕೆ ಆರೋಪಿಗಳು ಜಿಲ್ಲಾ ಕಾರಾಗೃಹದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ