ಚೆನ್ನೈ: ಲಿಯೋ ಸಿನಿಮಾದಲ್ಲಿ ಸಹನಟನಾಗಿದ್ದ ಮನ್ಸೂರ್ ಅಲಿ ಖಾನ್ ನಾಯಕಿ ತ್ರಿಷಾ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ತ್ರಿಷಾ ನಾಯಕಿ ಎಂದು ಗೊತ್ತಾದಾಗ ಆಕೆ ಜೊತೆ ಬೆಡ್ ರೂಂ ದೃಶ್ಯ ಅಥವಾ ರೇಪ್ ದೃಶ್ಯವಿರಬಹುದು ಎಂದು ಭಾವಿಸಿದ್ದೆ. ಆದರೆ ಇಡೀ ಸಿನಿಮಾದಲ್ಲಿ ಆಕೆಯ ಮುಖವೇ ತೋರಿಸಲಿಲ್ಲ ಎಂದು ಆಕ್ಷೇಪಾರ್ಹವಾಗಿ ಮನ್ಸೂರ್ ಹೇಳಿಕೆ ನೀಡಿದ್ದರು.
ಅವರ ಹೇಳಿಕೆ ವಿರುದ್ಧ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಸ್ವತಃ ತ್ರಿಷಾ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗ ಪೊಲೀಸರಿಗೆ ಮನ್ಸೂರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತ್ತು. ಅದರಂತೇ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದಕ್ಕೆ ಮೊದಲು ಮನ್ಸೂರ್ ನಾನ್ಯಾಕೆ ತ್ರಿಷಾ ಕ್ಷಮೆ ಕೇಳಬೇಕು ಎಂದು ಮರು ಪ್ರಶ್ನಿಸಿದ್ದರು. ಆದರೆ ಇದೀಗ ಕೇಸು, ಕೋರ್ಟು ಎಂದು ಕುತ್ತಿಗೆಗೆ ಬಂದ ಮೇಲೆ ತ್ರಿಷಾ ಅವರೇ ನನ್ನ ಕ್ಷಮಿಸಿ ಎಂದು ಕೇಳಿದ್ದಾರೆ ಎಂದು ಖ್ಯಾತ ಸಿನಿ ಮಾರುಕಟ್ಟೆ ತಜ್ಞ ರಮೇಶ್ ಬಾಲಾ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಹೇಳಿದ್ದಾರೆ.