ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ ಮಾಜಿ ಸಚಿವ, ಎನ್‌ಸಿಪಿ ಮುಖಂಡ ಹಾಗೂ ಚಿತ್ರರಂಗದ ಗಣ್ಯರಿಗೆ ಆಪ್ತರಾಗಿದ್ದ ಬಾಬಾ ಸಿದ್ದೀಕಿ ಹತ್ಯೆಗೂ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡಕ್ಕೂ ನಂಟಿರುವ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈಗಾಗಲೇ ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಮೂಲಗಳಿಂದ ಸಿಕ್ಕಾ ಮಾಹಿತಿ ಪ್ರಕಾರ ಬಂಧಿತ ಸಂಚುಕೋರರ ಹಿಟ್ ಲಿಸ್ಟ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಹಾಸ್ಯನಟರು, ರಾಜಕಾರಣಿಗಳು ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರತಿಸ್ಪರ್ಧಿಗಳ ಹೆಸರುಗಳಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.
ಹಲವು ಪ್ರಕರಣದಡಿಯಲ್ಲಿ ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರನ್ನು ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಪರಿಶೀಲನೆಗೆ ಒಳಗಾಗಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಅವರ ಹಿಟ್‌ಲಿಸ್ಟ್‌ನಲ್ಲಿರುವ ಕೆಲವು ದೊಡ್ಡ ಹೆಸರುಗಳು ಇಲ್ಲಿವೆ:
1.ಸಲ್ಮಾನ್ ಖಾನ್: ಸಂಚುಕೋರರ ಹಿಟ್‌ಲಿಸ್ಟ್‌ನಲ್ಲಿರುವ ಮೊದಲ ಹೆಸರೇ ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಹೆಸರು. ಕೃಷ್ಣಮೃಗಗಳನ್ನು ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿರುವ ಸಲ್ಮಾನ್ ಖಾನ್ ಅವರು ಬಿಷ್ಣೋಯ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಖಾನ್ ಮೇಲೆ ಕಣ್ಣಿಡಲು ಬಿಷ್ಣೋಯ್ ತಮ್ಮ ಸಹಾಯಕ ಸಂಪತ್ ನೆಹ್ರಾ ಅವರನ್ನು ಕಳುಹಿಸಿದ್ದರು ಆದರೆ ನೆಹ್ರಾ ಅವರನ್ನು ಹರಿಯಾಣ ಪೊಲೀಸ್ ವಿಶೇಷ ಕಾರ್ಯಪಡೆ ಬಂಧಿಸಿತು. ಏಪ್ರಿಲ್ 2024 ರಲ್ಲಿ ನಡೆದ ಗುಂಡಿನ ಯತ್ನವೂ ವಿಫಲವಾಯಿತು. ಪದೇ ಪದೇ ಜೀವಬೆದರಿಕೆ ಹಾಗೂ ಮನೆ ಮೇಲೆ ಗುಂಡಿನ ದಾಳಿ ಸಂಬಂಧ ನಟ ಸಲ್ಮಾನ್ ಖಾನ್‌ಗೆ ಇದೀಗ ಭದ್ರತೆಯನ್ನು ಹೆಚ್ಚಿಸಲಾಗಿದೆ.
2. ಶಗನ್‌ಪ್ರೀತ್ ಸಿಂಗ್: ಮೃತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮ್ಯಾನೇಜರ್ ಕೂಡ ಹಿಟ್‌ಲಿಸ್ಟ್‌ನಲ್ಲಿ ಎರಡನೇಯವರಾಗಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹಿರಿಯ ಸಹೋದರ ವಿಕ್ಕಿ ಮಿದ್ದುಖೇರಾ ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ್ದಕ್ಕೆ ಪ್ರತೀಕಾರವಾಗಿ ಶಗನ್ ಪ್ರೀತ್ ಹತ್ಯೆಗೆ ಬಿಷ್ನೋಯ್ ಗ್ಯಾಂಗ್ ಹೊಂಚು ಹಾಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
3. ಕೌಶಲ್ ಚೌಧರಿ: ಕುಖ್ಯಾತ ಬಾಂಬಿಹಾ ಗ್ಯಾಂಗ್‌ನ ಸದಸ್ಯ ಮತ್ತು ಬಿಷ್ಣೋಯಿ ಅವರ ಪ್ರತಿಸ್ಪರ್ಧಿ, ಚೌಧರಿ ಅವರು ಮಿದ್ದುಖೇರಾದ ಹಂತಕರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದಾರೆ ಎಂಬ ಆರೋಪವನ್ನು ಹೊಂದಿದ್ದರು, ಇದು ಅವರನ್ನು ಬಿಷ್ಣೋಯ್‌ನ ಹಿಟ್‌ಲಿಸ್ಟ್‌ನಲ್ಲಿ ಇರಿಸಿದೆ.