ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ನಟಿಸಿರೋ ಕಿಸ್ ಚಿತ್ರ ಇದೇ ತಿಂಗಳ ಇಪ್ಪತ್ತೇಳರಂದು ಬಿಡುಗಡೆಯಾಗಲಿದೆ. ಒಂದಕ್ಕಿಂತ ಒಂದು ಸೊಗಸಾಗಿರೋ ಹಾಡುಗಳೊಂದಿಗೆ ಪ್ರೇಕ್ಷಕರನ್ನು ಮೆಲುವಾಗಿ ಸೋಕುತ್ತಾ ಬಂದಿರೋ ಕಿಸ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕವೂ ಸಖತ್ ಸೌಂಡು ಮಾಡಿದೆ.
ಇದೀಗ ಚಿತ್ರತಂಡ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ. ಪ್ಯಾಥೋ ಮೂಡಿಗೆ ಜಾರಿಸಿ ಕಾಡುವಂತಿರೋ ಈ ಹಾಡು ಬಿಡುಗಡೆಯ ಕಡೇ ಕ್ಷಣಗಳಲ್ಲಿ ಕಿಸ್ ಕ್ರೇಜ್ ಅನ್ನು ಮತ್ತಷ್ಟು ತೀವ್ರಗೊಳಿಸುವಂತೆ ಮೂಡಿ ಬಂದಿದೆ.
ಈ ಹಾಡನ್ನು ಎಪಿ ಅರ್ಜುನ್ ಅವರೇ ಬರೆದಿದ್ದಾರೆ. ಸಂತೋಷ್ ವೆಂಕಿ ಧ್ವನಿಯಲ್ಲಿ ಮೂಡಿ ಬಂದಿರೋ ಕಣ್ಣ ನೀರಿದು ಜಾರುತಾ ಇದೆ ನೀನು ಇಲ್ಲದೆ ತುಂಬ ನೋವಾಗಿದೆ ಎಂಬ ಈ ಲಿರಿಕಲ್ ವೀಡಿಯೋ ಸಾಂಗಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಡಿ ಬೀಟ್ಸ್ ಯೂ ಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿರೋ ಈ ಗೀತೆಗೆ ಎಲ್ಲರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಅನೇಕರು ಈ ಹಾಡನ್ನು ಮೆಚ್ಚಿಕೊಳ್ಳುತ್ತಲೇ ಬೇಗನೆ ಕಿಸ್ ಅನ್ನು ಕಣ್ತುಂಬಿಕೊಳ್ಳುವ ಉತ್ಸಾಹವನ್ನೂ ಜಾಹೀರು ಮಾಡಿದ್ದಾರೆ.
ಕಿಸ್ ಎಂಬುದು ಪಕ್ಕಾ ಯುವ ಆವೇಗದ ಚಿತ್ರ ಅನ್ನೋದು ಈಗಾಗಲೇ ಸ್ಪಷ್ಟವಾಗಿದೆ. ಅದನ್ನು ನವಿರು ಪ್ರೇಮಕಾವ್ಯದಂಥಾ ಚಿತ್ರಗಳಿಗೆ ಹೆಸರಾಗಿರೋ ನಿರ್ದೇಶಕ ಎ ಪಿ ಅರ್ಜುನ್ ಮೋಹಕವಾಗಿಯೇ ಕಟ್ಟಿಕೊಟ್ಟಿರುತ್ತಾರೆಂಬ ನಂಬಿಕೆ ಎಲ್ಲರಲ್ಲಿಯೂ ಇದೆ. ಯಾರೇ ಆದರೂ ಮೋಹಿತರಾಗದಿರಲು ಸಾಧ್ಯವೇ ಇಲ್ಲ ಎಂಬಂಥಾ ಹಾಡುಗಳು ಇಡೀ ಚಿತ್ರ ಹೇಗೆ ಮೂಡಿ ಬಂದಿವೆ ಅನ್ನೋದಕ್ಕೆ ಕನ್ನಡಿಯಂತಿವೆ. ಅದನ್ನು ಸುಳ್ಳು ಮಾಡದಂಥಾ, ಕಾಡುವ ಕಥೆಯೊಂದನ್ನು ಈ ಸಿನಿಮಾ ಮೂಲಕ ಅರ್ಜುನ್ ಹೇಳ ಹೊರಟಿದ್ದಾರೆ. ಅರ್ಜುನ್ ಫಿಲಂಸ್ ಮೂಲಕ ಎಪಿ ಅರ್ಜುನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.