Publish Date: Sat, 12 Oct 2019 (18:06 IST)
Updated Date: Sat, 12 Oct 2019 (18:11 IST)
ಕೆಲ ದಿನಗಳ ಹಿಂದಷ್ಟೇ ಗಂಟುಮೂಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಹದಿಹರೆಯದ ಹೊಸ್ತಿಲಲ್ಲಿರೋ ಹುಡುಗಿಯೊಬ್ಬಳ ದೃಷ್ಟಿಯಲ್ಲಿ ತೆರೆದುಕೊಳ್ಳೋ ಈ ಕಥೆಯ ಸುಳಿವಿಗೆ, ಅದು ಮೂಡಿ ಬಂದಿದ್ದ ರೀತಿಗೆ ಪ್ರೇಕ್ಷಕರೆಲ್ಲ ಖುಷಿಗೊಂಡಿದ್ದರು. ಈ ಮೂಲಕ ರೂಪಾ ರಾವ್ ಮೂಲಕ ಭರವಸೆಯ ಮಹಿಳಾ ನಿರ್ದೇಶಕಿಯ ಆಗಮನವಾದ ಲಕ್ಷಣಗಳೂ ಕೂಡಾ ದಟ್ಟವಾಗಿಯೇ ಗೋಚರಿಸಿದ್ದವು. ಇದೀಗ ಈ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಕೂಡಾ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.
ಚಿತ್ರೀಕರಣವೂ ಸೇರಿದಂತೆ ಅದೆಷ್ಟೇ ಬ್ಯುಸಿಯಾಗಿದ್ದರೂ ಕೂಡಾ ಹೊಸಾ ಬಗೆಯ ಪ್ರಯತ್ನಗಳತ್ತ ಸುದೀಪ್ ಸದಾ ಕಣ್ಣಾಗಿರುತ್ತಾರೆ. ಅವುಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಲೇ ಬೆಂಬಲವಾಗಿ ನಿಲ್ಲುತ್ತಾರೆ. ಅದೇ ರೀತಿ ಹೊಸಾ ಅಲೆಯ ಚಿತ್ರವಾಗಿ ಪರಿಗಣಿಸಲ್ಪಟ್ಟಿರೋ ಗಂಟುಮೂಟೆಯ ಟ್ರೇಲರ್ ಅನ್ನು ನೋಡಿ ಈ ಬಗ್ಗೆ ಟ್ವಿಟರ್ ಮೂಲಕ ಸುದೀಪ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಒಂದು ಸಣ್ಣ ಟ್ರೈಲರ್ ಸಾವಿರ ಮಾತುಗಳನ್ನಾಡುತ್ತಿದೆ. ಇದು ಅದ್ಭುತ ಚಿಂತನೆಯನ್ನು ಸೂಚಿಸುವಂತಿದೆ. ಇಂಥ ಒಳ್ಳೆ ಪ್ರಯತ್ನವನ್ನು ಬೆಂಬಲಿಸಿ ಎಂದಿರೋ ಸುದೀಪ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಸುದೀಪ್ರಂಥಾ ಸ್ಟಾರ್ ನಟರೇ ಮೆಚ್ಚಿಕೊಂಡು ಮಾತಾಡಿರೋದರಿಂದ ಗಂಟುಮೂಟೆಯ ಹವಾ ಮತ್ತಷ್ಟು ತೀವ್ರವಾಗಿದೆ. ಹೈಸ್ಕೂಲು ಪ್ರೇಮಕಥೆಯನ್ನೊಳಗೊಂಡಿರೋ ಈ ಚಿತ್ರ ತೊಂಭತ್ತರ ದಶಕದ ಹದಿಹರೆಯದ ಮನಸ್ಥಿತಿಗೆ ಕನ್ನಡಿ ಹಿಡಿಯುವಂಥಾ ಕಥಾ ಹಂದರದೊಂದಿಗೆ ರೂಪುಗೊಂಡಿದೆ. ಸಾಮಾನ್ಯವಾಗಿ ಯಾವುದೇ ಪ್ರೇಮ ಕಥೆಗಳಾದರೂ ಹುಡುಗನ ದೃಷ್ಟಿಕೋನದಿಂದ ನಿರೂಪಣೆಯಾಗುತ್ತದೆ. ಆದರೆ ಇಲ್ಲಿ ಹೆಣ್ಣೊಬ್ಬಳ ದೃಷ್ಟಿಯಿಂದ ಅದನ್ನು ನಿರೂಪಿಸಲಾಗಿದೆ. ಕಥೆಯ ಕಸುವಿನಿಂದಲೇ ಅಂಥಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನ ಕಂಡಿರುವ ಈ ಚಿತ್ರ ಹೊಸಾ ಅಲೆಯ ಕಮರ್ಶಿಯಲ್ ಶೈಲಿಯದ್ದು. ಈ ಟ್ರೇಲರ್ ಕಾರಣದಿಂದಲೇ ಇದೀಗ ಪ್ರೇಕ್ಷಕರ ನಡುವೆ ಚರ್ಚೆಯಲ್ಲಿದೆ.