Publish Date: Wed, 05 May 2021 (09:35 IST)
Updated Date: Wed, 05 May 2021 (09:37 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ವೀಕೆಂಡ್ ಶೋಗೆ ಬರದೇ ಇರುವುದು ಸ್ಪರ್ಧಿಗಳಿಗೆ ಮಾತ್ರವಲ್ಲ, ಅವರ ಅಪ್ಪಟ ಅಭಿಮಾನಿಗಳಿಗೂ ಬೇಸರವುಂಟುಮಾಡಿದೆ.
ಮೊದಲ ಎರಡು ವಾರ ಅನಾರೋಗ್ಯದಿಂದಾಗಿ ಸುದೀಪ್ ಶೋನಲ್ಲಿ ಭಾಗಿಯಾಗಿರಲಿಲ್ಲ. ಅನಾರೋಗ್ಯದಿಂದ ಚೇತರಿಸಿದ ಬಳಿಕ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಎಲ್ಲಾ ರೀತಿಯ ಮನರಂಜನೆ ಕಾರ್ಯಕ್ರಮಗಳಿಗೆ ಬ್ರೇಕ್ ಬಿತ್ತು.
ಹೀಗಾಗಿ ಬಿಗ್ ಬಾಸ್ ವೀಕೆಂಡ್ ಶೋ ಶೂಟಿಂಗ್ ನಡೆಯುತ್ತಿಲ್ಲ. ಆದರೆ ಇದರಿಂದಾಗಿ ಅಭಿಮಾನಿಯೊಬ್ಬರು ತಮ್ಮ ಅಜ್ಜಿ ಸುದೀಪ್ ರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅಜ್ಜಿ ಯಾವಾಗಲೂ ಸುದೀಪ್ ಯಾವಾಗ ಬರ್ತಾರೆ? ಅವರು ಬರದೇ ಶೋ ನೋಡಕ್ಕಾಗ್ತಿಲ್ಲ ಅಂತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಸುದೀಪ್ ಪ್ರತಿಕ್ರಿಯಿಸಿದ್ದು, ಆಕೆಯ ಪ್ರೀತಿಗೆ ಚಿರಋಣಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರತಿಕ್ರಿಯಿಸಿದ್ದಾರೆ.