ಮಂಗಳೂರು: ಕೋಸ್ಟಲ್‌ವುಡ್ ನ ಖ್ಯಾತ ನಟ ಅರ್ಜುನ್ ಕಾಪಿಕಾಡ್ ನಟಿಸಿರುವ 'ಕಲ್ಜಿಗ' ಕನ್ನಡ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ನಟ ಕಾರಣಿಕದ ಕೊರಗಜ್ಜನ ದೈವದ ಅನುಕರಣ ಮಾಡಿದಕ್ಕೆ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ 'ಕಲ್ಜಿಗ' ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡಿತು.
ಕಾಂತಾರ ಸಿನಿಮಾದ ಬಳಿಕ ಸಿನಿಮಾಗಳಲ್ಲಿ ದೈವದ ಕುರಿತಾದ ಪಾತ್ರಗಳನ್ನು ಮಾಡುವುದಕ್ಕೆ ದೈವಾರಾಧಕರು ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ಇಂದು ಬಿಡುಗಡೆಗೊಂಡ ಕಲ್ಜಿಗ ಸಿನಿಮಾದಲ್ಲಿ ದೈವವನ್ನು ತೋರಿಸಿರುವುದಕ್ಕೆ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.
ಕೊರಗಜ್ಜನ ವೇಷಭೂಷಣ ಧರಿಸಿದ ನಟನೋರ್ವ ಸಿನಿಮಾದ ಶೂಟಿಂಗ್‌ಗಾಗಿ ನರ್ತನ ಮಾಡಿದ್ದಾರೆ. ಹೀಗಾಗಿ ಸಿನಿಮಾ ತಂಡದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನ ಆರಂಭಗೊಂಡಿದೆ. ಇದೀಗ ಚಿತ್ರದ ವಿರುದ್ಧ ಕಾನೂನು ಹೋರಾಟ ನಡೆಸುವುದಕ್ಕೂ ನಿರ್ಧಾರ ಮಾಡಿದ್ದಾರೆ.