ದುಬೈ: ಇತ್ತೀಚೆಗೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ದೊಡ್ಮನೆ ಮೊಮ್ಮಗಳು ಆರಾಧ್ಯ ಬಚ್ಚನ್, ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಕಾಲಿಗೆ ನಮಸ್ಕರಿಸಿದ ವಿಡಿಯೋವೊಂದು ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ದುಬೈನಲ್ಲಿ ಕಳೆದ ವಾರಂತ್ಯಕ್ಕೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೆದಿತ್ತು. ನಟಿ ಐಶ್ವರ್ಯಾ ತಮ್ಮ ಮಗಳು ಆರಾಧ್ಯ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಪೊನ್ನಿಯನ್ ಸೆಲ್ವನ್ ಚಿತ್ರದ ಅಭಿನಯಕ್ಕಾಗಿ ಐಶ್ವರ್ಯಾಗೆ ಪ್ರಶಸ್ತಿ ಬಂದಿತ್ತು. ಈ ವೇಳೆ ಆರಾಧ್ಯ ನಡೆದುಕೊಂಡ ರೀತಿಗೆ ಎಲ್ಲರೂ ಹೊಗಳುತ್ತಿದ್ದಾರೆ.
ಐಶ್ವರ್ಯಾ ಪ್ರಶಸ್ತಿ ಸ್ವಿಕರಿಸಿ ಚಿಯಾನ್ ವಿಕ್ರಮ್ ಜೊತೆ ವೇದಿಕೆಯಿಂದ ಕೆಳಗಿಳಿದು ಬರುತ್ತಿರುವಾಗ ಮಗಳು ಆರಾಧ್ಯ ಓಡಿ ಬಂದು ಅಮ್ಮನನ್ನು ಅಪ್ಪಿ ಅಭಿನಂದಿಸುತ್ತಾಳೆ. ಈ ವೇಳೆ ಅಲ್ಲೇ ಇದ್ದ ಶಿವರಾಜ್ ಕುಮಾರ್ ರನ್ನು ನೋಡಿ ಐಶ್ವರ್ಯಾ ಕೈಕುಲುಕಿ ಮಾತನಾಡಿಸುತ್ತಾರೆ. ಬಳಿಕ ತಮ್ಮ ಮಗಳು ಆರಾಧ್ಯಳನ್ನು ಪರಿಚಯಿಸುತ್ತಾರೆ.
ಆರಾಧ್ಯಳನ್ನು ನೋಡಿ ಶಿವಣ್ಣ ಮೊದಲು ಕೈಕುಲುಕಿ ವಿಶ್ ಮಾಡುತ್ತಾರೆ. ಆದರೆ ಆರಾಧ್ಯ ತಕ್ಷಣವೇ ಶಿವಣ್ಣ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾಳೆ. ಆಕೆಯ ಈ ವರ್ತನೆಗೆ ನೆಟ್ಟಿಗರು ಭಾರೀ ಹೊಗಳಿದ್ದಾರೆ. ಐಶ್ ತಮ್ಮ ಮಗಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.