ಬೆಂಗಳೂರು: ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನಾಚರಣೆ ಸೋಮವಾರ ನಡೆಯಿತು. ಅದರ ಬೆನ್ನಲ್ಲೇ ಅಪ್ಪು ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಗುಡ್‌ನ್ಯೂಸ್ ನೀಡಿದ್ದಾರೆ.
2021 ಅಕ್ಟೋಬರ್ 29ರಂದು ಇಹಲೋಕ ತ್ಯಜಿಸಿದ ಪುನೀತ್ ರಾಜ್‌ಕುಮಾರ್ ಅವರ ನೆನಪು ಅಭಿಮಾನಿಗಳ ಮನದಲ್ಲಿ ಇನ್ನೂ ಹಸಿರಾಗಿದೆ. ಇದೀಗ ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಬರಲು ಸಿದ್ಧವಾಗುತ್ತಿದೆ. ಅಪ್ಪು ಹೆಸರಿನಲ್ಲೇ ಪುಸ್ತಕ ರಿಲೀಸ್ ಆಗಲಿದೆ.
ತೀವ್ರ ಕುತೂಹಲ ಕೆರಳಿಸಿರುವ ಅಪ್ಪು ಪುಸ್ತಕದ ಮುಖಪುಟವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತನ್ನ ಇಬ್ಬರು ಪುತ್ರಿಯರಾದ ವಂದಿತಾ ಮತ್ತು ಧೃತಿ ಅವರೊಂದಿಗೆ ಬಿಡುಗಡೆಗೊಳಿಸಿದ್ದಾರೆ. ಈ ಕುರಿತ ಚಿತ್ರಗಳನ್ನು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ಪ್ರಸ್ತುತಪಡಿಸುತ್ತಿದ್ದೇವೆ 'ಅಪ್ಪು' - ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ... ಶೀರ್ಷಿಕೆ ನೀಡಿದ್ದಾರೆ.
ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಜೊತೆಯಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಇದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಸದ್ಯ ಬುಕ್‌ನ ಕವರ್ ಪೇಜ್ ಹೇಗಿದೆ ಎಂಬುದನ್ನು ಪುನೀತ್ ಜನ್ಮದಿನದಂದು ಸೋಮವಾರ ಅಶ್ವಿನಿ ರಿವೀಲ್ ಮಾಡಿದ್ದಾರೆ. ಅಪ್ಪು ಬಯೋಗ್ರಫಿ ಬರಲಿರುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ.