ಸಿನಿಮಾಕ್ಕಾಗಿ ನೂರಾರು ಮರಗಳನ್ನು ಕಡಿಯಲಾಗಿದೆ ಎಂದು ಟಾಕ್ಸಿಕ್ ಸಿನಿಮಾ ನಿರ್ಮಾಪಕರ ಮೇಲೆ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಈ ಮೂಲಕ ಸಿನಿಮಾದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ನಿರಾಳರಾಗಿದ್ದಾರೆ.
ಅರಣ್ಯ ಇಲಾಖೆ ನೀಡಿದ ದೂರಿನಂತೆ ಟಾಕ್ಸಿಕ್ ಚಿತ್ರತಂಡ ಸಿನಿಮಾಕ್ಕಾಗಿ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಹಾಗೂ ಮಾನ್ಸಸ್ಟರ್ ಮೈಂಡ್ಸ್ ವಿರುದ್ಧ ರಾಜ್ಯ ಅರಣ್ಯ ಇಲಾಖೆ ದೂರು ನೀಡಿತ್ತು. ದೂರು ಆಧರಿಸಿ ಎಫ್ಐಆರ್ ಸಹ ದಾಖಲಾಗಿತ್ತು. ಇದೀಗ ಈ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರಿನ ಹೊರವಲಯದಲ್ಲಿರುವ ಎಚ್ಎಂಟಿಯ ಮೈದಾನದಲ್ಲಿ ಟಾಕ್ಸಿಕ್ ಸಿನಿಮಾ ಸೆಟ್ ನಿರ್ಮಾಣ ಮಾಡಲಾಗಿತ್ತು. ಭಾರಿ ಮೊತ್ತದ ಹಣ ಖರ್ಚು ಮಾಡಿ ಬೃಹತ್ ಸೆಟ್ ಅನ್ನು ಇಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಈ ಸೆಟ್ ನಿರ್ಮಾಣ ಮಾಡಲು ಮೈದಾನದಲ್ಲಿದ್ದ ಮರಗಳನ್ನು ಅಕ್ರಮವಾಗಿ, ಯಾವುದೇ ಪೂರ್ವಾನುಮತಿ ಇಲ್ಲದೆ ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಆರೋಪ ಮಾಡಿತ್ತು, ವಕೀಲರೊಬ್ಬರು ಸಹ ನ್ಯಾಯಾಲಯದಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಹ ಸಲ್ಲಿಕೆ ಮಾಡಿದ್ದರು.
ಅದಲ್ಲದೆ ಸ್ವತಃ ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರೇ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸಿದರು. ಅದಲ್ಲದೆ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.