Publish Date: Thu, 11 Aug 2022 (08:20 IST)
Updated Date: Thu, 11 Aug 2022 (08:58 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಥಿಯೇಟರ್ ನಂತೇ ಒಟಿಟಿಯಲ್ಲೂ ಸಿನಿಮಾ ವೀಕ್ಷಿಸುವ ಒಂದು ವರ್ಗವೇ ಇದೆ. ಈ ವಾರವಂತೂ ಒಟಿಟಿ ಪ್ರೇಕ್ಷಕರಿಗೂ ಸುಗ್ಗಿಯ ಕಾಲ. ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ ಗಿರಿಕತೆ ಸಿನಿಮಾ ಆಗಸ್ಟ್ 12 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ವೂಟ್ ಆಪ್ ನಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕುರಿತಾದ ಶಹಬ್ಬಾಶ್ ಮಿಥು ಸಿನಿಮಾ ಸದ್ಯದಲ್ಲೇ ಪ್ರಸಾರವಾಗಲಿದೆ. ಇದರ ದಿನಾಂಕ ಘೋಷಣೆಯಾಗಿಲ್ಲ.
ಕನ್ನಡ, ತಮಿಳು, ತೆಲುಗಿನಲ್ಲಿ ಬಿಡುಗಡೆಯಾಗಿದ್ದ ಸಾಯಿ ಪಲ್ಲವಿ ಅಭಿನಯದ ಗಾರ್ಗಿ ಸಿನಿಮಾ ಆಗಸ್ಟ್ 12 ರಿಂದ ಪ್ರಸಾರವಾಗಲಿದೆ. ನಾಗಚೈತನ್ಯ ಅಭಿನಯದ ಥ್ಯಾಂಕ್ಯೂ ಸಿನಿಮಾ ಥಿಯೇಟರ್ ನಲ್ಲಿ ಸದ್ದು ಮಾಡದಿದ್ದರೂ ಇದೀಗ ಅಮಝೋನ್ ಪ್ರೈಮ್ ನಲ್ಲಿ ನಾಳೆಯಿಂದ ವೀಕ್ಷಣೆಗೆ ಲಭ್ಯವಿರಲಿದೆ. ಇದರ ಜೊತೆಗೆ ಇತ್ತೀಚೆಗಿನ ದಿನಗಳಲ್ಲಿ ಬಹುಭಾಷೆಗಳಲ್ಲಿ ಮಿಂಚುತ್ತಿರುವ ಫಹಾದ್ ಫಾಸಿಲ್ ನಾಯಕರಾಗಿರುವ ಮಲಯಾಳಂ ಸಿನಿಮಾ ಮಲಯ ಕುಂಙ ಇದೀಗ ಅಮೆಝೋನ್ ಪ್ರೈಮ್ ನಲ್ಲಿ ಲಭ್ಯವಿದೆ. ಇವಿಷ್ಟು ಸಿನಿಮಾದ ಜೊತೆಗೆ ಈ ವಾರ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಸಾರ ಮಾಡಲಿದೆ.