Publish Date: Tue, 16 Apr 2024 (17:24 IST)
Updated Date: Tue, 16 Apr 2024 (17:31 IST)
ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರು ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಾಲಿವುಡ್ ನಟ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ನಟ ದೂರನ್ನು ನೀಡಿದ್ದಾರೆ.
ಈಚೆಗೆ ಅಮೀರ್ ಖಾನ್ ಅವರು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸಿ ಮಾಡಿರುವ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮೂಲಕ ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅಮೀರ್ ಖಾನ್ ಮಾತನಾಡಿರುವಂತೆ ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್ ವಿಡಿಯೊ ಜನರೇಟ್ ಮಾಡಲಾಗಿದೆ.
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೋದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ.ಗಳ ಭರವಸೆ ನೀಡಿದ್ದಕ್ಕಾಗಿ ಆಮಿರ್ ಪ್ರಧಾನಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ತೋರಿಸಲಾಗಿದೆ.
ಈ ಬಗ್ಗೆ ಅವರ ವಕ್ತಾರ ಪ್ರತಿಕ್ರಿಯಿಸಿ, ನಟ ಅಮೀರ್ ಖಾನ್ ಅವರು ತಮ್ಮ 35 ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಜತೆಗೆ, ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಖಾನ್ ಶ್ರಮಿಸಿದ್ದಾರೆ ಎಂದರು.