ಬೆಂಗಳೂರು: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಪೋಟಿಸಿದ್ದ ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಈ ಪ್ರಕರಣದಲ್ಲಿ ಅವರ ಮೇಲಿನ ಆರೋಪ ಸಾಬೀತಾದರೆ 10 ವರ್ಷದವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಮ್ಮ ಸ್ನೇಹಿತರ ಕೃಷಿ ಹೊಂಡದಲ್ಲಿ ಸೋಡಿಯಂ ಸ್ಪೋಟಿಸಿದ್ದ ಡ್ರೋಣ್ ಪ್ರತಾಪ್ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಈ ವಿಚಾರ ಬಹಿರಂಗವಾಗುತ್ತಿದ್ದಂತೇ ಅವರ ಮೇಲೆ ಕೇಸ್ ದಾಖಲಾಗಿತ್ತು.
ನಿನ್ನೆ ಡ್ರೋಣ್ ಪ್ರತಾಪ್ ರನ್ನು ಸ್ಥಳಕ್ಕೆ ಕರೆತಂದು ಪೊಲೀಸರು ಮಹಜರು ಮಾಡಿಸಿದ್ದಾರೆ. ಡ್ರೋಣ್ ಪ್ರತಾಪ್ ಸೋಡಿಯಂ ಖರೀದಿಸಿದ್ದು ಎಲ್ಲಿಂದ, ಅವರಿಗೆ ತಂದುಕೊಟ್ಟಿದ್ದು ಯಾರು, ಸ್ಪೋಟದ ವಿಡಿಯೋ ಮಾಡಿದ ಕ್ಯಾಮರಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮನರಂಜನೆಗೆಂದು ಮಾಡಿದ ಕೆಲಸವೊಂದು ಡ್ರೋಣ್ ಪ್ರತಾಪ್ ಕುತ್ತಿಗೆಗೆ ಬಂದಿದೆ. ಇದು ಅವರ ಜೀವನವನ್ನೇ ಹಾಳು ಮಾಡುವ ಹಂತಕ್ಕೆ ಬಂದಿದೆ. ಈ ಹಿಂದೆ ಡ್ರೋಣ್ ತಯಾರಿ ವಿಚಾರದಲ್ಲಿ ಅವರು ವಂಚಕ ಎಂಬ ಹಣೆಪಟ್ಟಿ ಬಂದಿತ್ತು. ಆದರೆ ಬಳಿಕ ಅವರು ಬಿಗ್ ಬಾಸ್ ಗೆ ಹೋದ ಮೇಲೆ ಜನರ ಪ್ರೀತಿ ಗಳಿಸಿದ್ದರು. ಆದರೆ ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.