Publish Date: Sat, 29 Jun 2024 (11:19 IST)
Updated Date: Sat, 29 Jun 2024 (11:22 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ಸುದ್ದಿ ಮಾಡಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮತ್ತು ನಟ ದರ್ಶನ್ ಅರೆಸ್ಟ್ ಪ್ರಕರಣ ಈಗ ಕಿರುತೆರೆಯಲ್ಲಿ ಪ್ರಸಾರವಾಗಲಿದೆ! ಕಿರುತೆರೆಯ ಶೋ ಒಂದರಲ್ಲಿ ಇದೇ ಕತೆಯನ್ನು ಹೋಲುವ ಎಪಿಸೋಡ್ ಪ್ರಸಾರವಾಗಲಿದೆ.
ದರ್ಶನ್ ಪ್ರಕರಣವನ್ನೇ ಹೋಲುವ ಕತೆಯಿರುವ ಕ್ರೈಂ ಎಪಿಸೋಡ್ ಒಂದನ್ನು ಪ್ರಸಾರ ಮಾಡಲು ಕಲರ್ಸ್ ಕನ್ನಡ ವಾಹಿನಿ ಸಜ್ಜಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶಾಂತಂ ಪಾಪಂ ಎಂಬ ಕ್ರೈಂ ಸೀರೀಸ್ ನಲ್ಲಿ ದರ್ಶನ್ ಪ್ರಕರಣವನ್ನೇ ಹೋಲುವ ಕತೆಯನ್ನು ಹೇಳಲಾಗುತ್ತಿದೆ.
ಈ ಸೀರೀಸ್ ರಾತ್ರಿ 10.30 ಕ್ಕೆ ಪ್ರಸಾರವಾಗುತ್ತದೆ. ಈ ಸೀರೀಸ್ ನ ಒಂದು ಎಪಿಸೋಡ್ ನ ಪ್ರೋಮೋ ಈಗ ಹರಿಯಬಿಡಲಾಗಿದೆ. ಇದನ್ನು ನೋಡಿದರೆ ಇದು ದರ್ಶನ್ ಪ್ರಕರಣವೆಂದೇ ಅನುಮಾನ ಮೂಡಿಸುತ್ತಿದೆ. ನಿನ್ನ ಟೈಂ ಚೆನ್ನಾಗಿದ್ದಾಗ ತಗ್ಗಿ ಬಗ್ಗಿ ನಡೆಯಬೇಕಿತ್ತು. ಆಗ ಈವತ್ತು ತಲೆ ತಗ್ಗಿಸಿ ನಡೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನಾಯಕನಿಗೆ ಪೊಲೀಸ್ ಹೇಳುವ ಸನ್ನಿವೇಶವಿದೆ. ಇನ್ನೊಂದು ಕಡೆ ವಾಸು ಮತ್ತು ಅಕ್ಕ ಚೆನ್ನಾಗಿಯೇ ಇದ್ದರು, ಆ ನಟಿ ಬಂದ ಮೇಲೆ ಎಲ್ಲಾ ಹಾಳಾಯಿತು ಎಂದು ಹೇಳಲಾಗುತ್ತದೆ.
ಇದನ್ನು ನೋಡಿದರೆ ಇದು ದರ್ಶನ್ ಜೀವನ ಕತೆಯೇ ಎನ್ನಲಾಗಿದೆ. ಈ ಎಪಿಸೋಡ್ ಗೆ ಡೇರ್ ಡೆವಿಲ್ ದೇವದಾಸ್ ಎಂದು ಹೆಸರಿಡಲಾಗಿದೆ. ಈ ಎಪಿಸೋಡ್ ಖಂಡಿತಾ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ಇಂತಹದ್ದೊಂದು ಪ್ರಯೋಗ ಮಾಡುವ ಧೈರ್ಯ ಮಾಡಿದ ವಾಹಿನಿಯನ್ನು ಮೆಚ್ಚಲೇಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.