ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ (ಸೆಪ್ಟೆಂಬರ್ 20, 2025) ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ 2023 ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿತು.
ಈ ಸಂಬಂಧ MIB ಸಚಿವಾಲಯವು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು, "ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ನಟ, ನಿರ್ದೇಶಕ ಮತ್ತು ನಿರ್ಮಾಪಕ ಮೋಹನ್ ಲಾಲ್ ಅವರನ್ನು ಗೌರವಿಸಲಾಗುತ್ತಿದೆ" ಎಂದು ಹೇಳಿದೆ.
ಮಂಗಳವಾರ (ಸೆಪ್ಟೆಂಬರ್ 23, 2025) 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಿನಲ್ಲಿ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. 4 ದಶಕಗಳ ಸಿನಿ ಪ್ರಯಾಣದಲ್ಲಿ ಮೋಹನ್ ಲಾಲ್ ಅವರು ಮಲಯಾಳಂ, ತಮಿಳು, ತೆಲುಗು, ಹಿಂದಿ, ಕನ್ನಡದಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ಮಾತ್ರ, ದೃಶ್ಯಂ, ವನಪ್ರಸ್ಥಂ, ಮುಂದಿರಿವಲ್ಲಿಕಲ್ ತಳಿರ್ಕುಂಬೋಲ್, ಪುಲಿಮುರುಗನ್ ಚಿತ್ರಗಳ ಮೂಲಕ ಮೋಹನ್ ಲಾಲ್ ಗಮನ ಸೆಳೆದಿದ್ದರು.