ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ 12ನೇ ಆವೃತ್ತಿಯು ಅಂತಿಮ ಘಟ್ಟಕ್ಕೆ ಬಂದಿದೆ. ಫೈನಲ್ ವಾರದಲ್ಲಿ ಆರು ಮಂದಿ ಸ್ಪರ್ಧಿಗಳು ಪ್ರಶಸ್ತಿಗೆ ಕಾದಾಟ ನಡೆಸುತ್ತಿದ್ದಾರೆ. ಈ ಮಧ್ಯೆ ವಾಹಿನಿಯ ಪ್ರೋಗ್ರಾಂ ಹೆಡ್‌ಗೆ ಶಾಕ್ ಎದುರಾಗಿದೆ.
ರಣಹದ್ದು ಬಗ್ಗೆ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ತಪ್ಪಾದ ಮಾಹಿತಿ ಹರಡಿದ ಆರೋಪವಿದೆ. ರಣಹದ್ದು ಸಂರಕ್ಷಣಾ ಟ್ರಸ್ಟ್ ವತಿಯಿಂದ ದೂರು ನೀಡಿದ್ದ ಹಿನ್ನೆಲೆ, ಬಿಗ್ ಬಾಸ್ ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್ ಜಾರಿ ನೀಡಲಾಗಿದೆ.
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಣಹದ್ದು ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವುದು ಎಂದು ತಪ್ಪು ಮಾಹಿತಿ ಹರಡಲಾಗಿದೆ ಎಂದು ಆರೋಪಿಸಲಾಗಿದೆ.
ಇದು ಪಕ್ಷಿ ಪ್ರೇಮಿಗಳಿಗೆ ಬೇಸರ ತರಿಸಿದ್ದು, ಅಳಿವಿನಂಚಿನಲ್ಲಿರುವ ಪಕ್ಷಿ ಉಳಿವಿಗೆ ಹಿನ್ನಡೆಯಾಗಲಿದೆ. ಹಾಗಾಗಿ, ಹದ್ದು ಹಾಗೂ ರಣಹದ್ದಿಗೂ ಇರುವ ವ್ಯತ್ಯಾಸದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ, ಖಾಸಗಿ ಚಾನಲ್‌ನ ಪ್ರೋಗ್ರಾಂ ಹೆಡ್‌ಗೆ ನೋಟಿಸ್ ನೀಡಿ ಸೂಚನೆ ನೀಡಲಾಗಿದೆ. ರಾಮನಗರ ಡಿಆರ್‌ಎಫ್ಓ ಸುಷ್ಮಾ ಖುದ್ದು ನೋಟಿಸ್ ನೀಡಿ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪಷ್ಟೀಕರಣ ನೀಡುವಂತೆ ತಿಳಿಹೇಳಿದ್ದಾರೆ.
ರಣಹದ್ದು ಸಂರಕ್ಷಣಾ ಟ್ರಸ್ಟ್ ನೀಡಿದ ದೂರಿನನ್ವಯ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು, ರಣಹದ್ದುಗಳು ಯಾವುದೇ ಪ್ರಾಣಿಗಳನ್ನ ಬೇಟೆಯಾಡುವುದಿಲ್ಲ. ಹದ್ದು ಹಾಗೂ ರಣಹದ್ದಿಗೂ ಬಹಳ ವ್ಯತ್ಯಾಸ ಇದೆ ಎಂದು ವಿವರಿಸಿದ್ದಾರೆ.