ಬಿಗ್ಬಾಸ್ ಮನೆಯಲ್ಲಿ ಜೋರಾದ ಜಗಳ ನಿಲ್ಲುವಂತೆ ಕಾಣುತ್ತಿಲ್ಲ. ಸದಾ ತಪ್ಪು ತಿಳುವಳಿಕೆಗಳಿಂದ ಒಬ್ಬರಿಗೊಬ್ಬರು ಜಗಳವಾಡುತ್ತಲೇ ಇದ್ದಾರೆ.
ಮೊದಲ ವಾರವೇ ಚಕ್ರವರ್ತಿ ಚಂದ್ರಚೂಡ್ ಅವರು ಮಂಜು ಪಾವಗಡ ಜೊತೆ ಜಗಳ ಮಾಡಿದ್ದರು. ಮಾತಿಗೆ ಮಾತು ಬೆಳೆದು, ಅದು ವೈಯಕ್ತಿಕ ವಿಚಾರಗಳ ಬಗ್ಗೆಯೆಲ್ಲ ಮಾತನಾಡುವಂತೆ ಆಯಿತು. ದಿವ್ಯಾ ಸುರೇಶ್ ಬಿಕ್ಕಿ ಬಿಕ್ಕಿ ಅಳುವಂತಾಯ್ತು. ಪ್ರಿಯಾಂಕಾ ತಿಮ್ಮೇಶ್ ಅವರೊಂದಿಗೂ ಚಕ್ರವರ್ತಿ ಜಗಳ ಮಾಡಿಕೊಂಡಿದ್ದಾರೆ. ಇದೆಲ್ಲವೂ ಮನೆಯಲ್ಲಿ ಬಿಗುವಿನ ವಾತಾವರಣವನ್ನು ಸೃಷ್ಟಿ ಮಾಡಿದೆ.
ಇದನ್ನೆಲ್ಲ ನೋಡಿದ ಶಮಂತ್ ಗೌಡ ಒಂದು ಹಾಡನ್ನು ಬರೆದು, ಹಾಡಿದ್ದಾರೆ. ಅದು ಕೂಡ ಬೇಸರದಿಂದ. 'ಒಂದು ಟಾಸ್ಕ್ ಆದಮೇಲೆ ಮನೆಯಲ್ಲಿ ಎಲ್ಲರೂ ಸಡನ್ ಆಗಿ ಸೈಲೆಂಟ್ ಆಗಿದ್ದಾರೆ. ಇದರಿಂದ ನನಗೆ ವೈಯಕ್ತಿಕವಾಗಿ ಬೇಜಾರು ಆಯ್ತು. ಅದನ್ನು ಈ ಹಾಡಿನ ಮೂಲಕ ಹೇಳ್ತಾ ಇದ್ದೇನೆ' ಎಂದು ಶಮಂತ್ ಹೇಳಿಕೊಂಡಿದ್ದಾರೆ.