ಬೆಂಗಳೂರು: ಒಂದು ಸಿನಿಮಾದಲ್ಲಿ ನಾಯಕಿಗೆ ಆಕ್ಸಿಡೆಂಟ್ ಆಗುವುದು, ಆಕೆ ಎಲ್ಲವನ್ನೂ ಮರೆತು ಹೋಗುವುದು, ಮತ್ತೆ ನಾಯಕ ಹೇಗೇಗೋ ಮಾಡಿ ಆಕೆಗೆ ನೆನಪು ಬರಿಸುವುದು. ಇದರ ನಡುವೆ ಒಂದಿಷ್ಟು ಡ್ರಾಮಾ ಇದೆಲ್ಲಾ ಮಾಮೂಲು ಕತೆ. ಆದರೆ ಇದನ್ನೇ ಭೀಮಸೇನ ನಳಮಹಾರಾಜ ಡಿಫರೆಂಟ್ ಆಗಿ ಉಣಬಡಿಸಿದ್ದಾನೆ.
ಹೆಸರೇ ಹೇಳುವಂತೆ ನಾಯಕ ಅತ್ಯುತ್ತಮ ಬಾಣಸಿಗ. ಪಾಕವೇ ಅವನ ಪ್ರಪಂಚ. ಹಾಗಿದ್ದವನ ಜೀವನದಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ. ಅವಳಿಗೂ ಪ್ರೀತಿಯ ಆಸರೆ ಬೇಕಾಗಿರುತ್ತದೆ. ಇಬ್ಬರೂ ಜೊತೆಯಾಗುತ್ತಾರೆ. ಅನಿರೀಕ್ಷಿ ಸಂದರ್ಭವೊಂದರಲ್ಲಿ ಮದುವೆಯೂ ಆಗುತ್ತದೆ. ಆದರೆ ಅದಾದ ನಂತರ ಇಬ್ಬರದೂ ಹ್ಯಾಪೀ ಎಂಡಿಂಗ್ ಎಂದರೆ ತಪ್ಪಾಗುತ್ತದೆ. ಆಗಲೇ ಇಬ್ಬರ ಜೀವನದಲ್ಲೂ ಸಮಸ್ಯೆ ಶುರುವಾಗುವುದು.
ನಾಯಕಿಗೆ ಅಪಘಾತವಾಗಿ ಆಕೆ ಹಳೆಯದೆಲ್ಲವನ್ನೂ ಮರೆತಿರುತ್ತಾಳೆ. ಆದರೆ ಆಕೆಯ ನೆನಪು ಮರಳಿ ಪಡೆಯಲು ನಾಯಕ ಪಡುವ ಸಾಹಸ, ಈ ನಡುವೆ ಆತ ಹೇಳುವ ಕತೆ, ಅದಕ್ಕೆ ಸಿಗುವ ಕ್ಲೈಮ್ಯಾಕ್ಸ್ ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ಪ್ರಮುಖ ಪಾತ್ರದಲ್ಲಿ ಅರವಿಂದ್ ಅಯ್ಯರ್, ಪ್ರಿಯಾಂಕ ತಿಮ್ಮೇಶ್ ಸಹಜವಾಗಿ ಅಭಿನಯಿಸಿದ್ದಾರೆ. ಇನ್ನು,ಹಿಟ್ಲರ್ ಅಪ್ಪನಾಗಿ ಕಾಣಿಸಿಕೊಂಡಿರುವ ಅಚ್ಯುತ್ ರಾವ್ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಜತೆಗೆ ಬೇಬಿ ಡಾಲ್ ಆದ್ಯ ಮುದ್ದು ಮುದ್ದಾಗಿ ಖುಷಿಕೊಡುತ್ತಾರೆ. ಹಿನ್ನಲೆ ಸಂಗೀತ, ಹಚ್ಚಹಸಿರಿನ ಹಿನ್ನಲೆ ಎಲ್ಲವೂ ಮನಮುಟ್ಟುವಂತಿದೆ. ಹೊಸಬರ ಹೊಸ ಪ್ರಯತ್ನವನ್ನು ಮೆಚ್ಚಲೇಬೇಕಾಗಿದೆ. ಒಮ್ಮೆ ನೋಡಲಡ್ಡಿಯಿಲ್ಲದ, ವಿಭಿನ್ನ ಪ್ರಯತ್ನದ ಸಿನಿಮಾವಿದು.