ಬೆಂಗಳೂರು: ಬಿಗ್ ಬಾಸ್ ಕನ್ನಡ 11 ರ ವಿಜೇತರಾಗಿ ಹೊರಹೊಮ್ಮಿದ ಹಳ್ಳಿ ಹೈದ ಹನುಮಂತ ಇಂದು ತಮ್ಮ ತವರಿಗೆ ಭೇಟಿ ನೀಡಲಿದ್ದಾರೆ. ಅವರ ಸ್ವಾಗತಕ್ಕೆ ಗ್ರಾಮಸ್ಥರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಹನುಮಂತ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿಯವರು. ಹನುಮಂತ ಗೆದ್ದಿರುವುದು ಗ್ರಾಮಸ್ಥರಲ್ಲಿ ಸಂಭ್ರಮವುಂಟು ಮಾಡಿದೆ. ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹೋಗಿ ವಿನ್ನರ್ ಆಗಿ ಹನುಮಂತ ದಾಖಲೆ ಮಾಡಿದ್ದಾರೆ.
ಬಿಗ್ ಬಾಸ್ ಗೆದ್ದ ಮೇಲೆ ಇಂದು ಮೊದಲ ಬಾರಿಗೆ ಅವರು ತಮ್ಮ ತಂದೆ-ತಾಯಿ ಜೊತೆಗೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅವರ ಸ್ವಾಗತಕ್ಕೆ ಡೊಳ್ಳು ಕುಣಿತ, ಭಜನೆ ಹಾಗೂ ಜಾಂಜ್ ಮೇಳ ಆಯೋಜಿಸಿದ್ದಾರೆ. ತಮ್ಮ ಮನೆ ಮಗ ಹನುಮಂತನನ್ನು ಭರ್ಜರಿಯಾಗಿ ಸ್ವಾಗತಿಸಲು ತಯಾರಿ ನಡೆಸಿದ್ದಾರೆ.
ಕುರಿಗಾಹಿಯಾಗಿದ್ದ ಹನುಮಂತನಿಗೆ ಹಾಡುವ ಕಲೆ ಹುಟ್ಟಿನಿಂದ ಬಂದಿದ್ದು. ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿದ್ದ ಹನುಮಂತ ತನ್ನ ಮುಗ್ಧತನದಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದವರು. ಇದೀಗ ಬಿಗ್ ಬಾಸ್ ಶೋವನ್ನೇ ಗೆದ್ದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.