ಬೆಂಗಳೂರು: ಕನ್ನಡದ ಭಜರಂಗಿ, ಅಜಿತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ್ದ ವಿದ್ಯಾ ನಂದೀಶ್ ಅವರು ಗಂಡನಿಂದಲೇ ಹತ್ಯೆಯಾಗಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ಅವರ ಹತ್ಯೆಯಾಗಿದೆ. ಅವರು ಸಿನಿಮಾ ಮಾತ್ರವಲ್ಲ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಶಿವರಾಜ್ಕುಮಾರ್ ನಟನೆಯ ಸೂಪರ್ ಹಿಟ್ ಚಿತ್ರ ಭಜರಂಗಿ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಚಿರಂಜೀವಿ ಸರ್ಜಾ ನಟನೆಯ ಅಜಿತ್ ಚಿತ್ರದಲ್ಲಿ ನಾಯಕನ ಸ್ನೇಹಿತೆಯ ಪಾತ್ರದಲ್ಲಿ ಅಭಿನಯಿಸಿದ್ದರು. ಮಾತ್ರವಲ್ಲ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ನಿಭಾಯಿಸಿದ್ದರು.
ವಿದ್ಯಾ ಅವರು ಕಾಂಗ್ರೆಸ್ನಲ್ಲಿ ಕೆಲ ನಾಯಕರೊಂದಿಗೆ ಆಪ್ತರಾಗಿದ್ದುದು ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು ಎನ್ನಲಾಗಿದೆ. ಅವರು ಸಮಾಜ ಸೇವಕ, ಬನ್ನೂರು ಸಮೀಪದ ತುರಗನೂರಿನ ನಂದೀಶ್ ಅವರನ್ನು ವಿವಾಹವಾಗಿದ್ದರು.
ವಿದ್ಯಾ ನಂದೀಶ್ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ವಿದ್ಯಾ ನಂದೀಶ್ ಮೈಸೂರಿನ ಶ್ರೀರಾಮಪುರದಲ್ಲಿ ಪತಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು. ಬನ್ನೂರಿನ ತುರಗನೂರಿನಲ್ಲಿ ಪತಿಯ ಮನೆಗೆ ಆಕೆ ತೆರಳಿದ್ದಾಗ ಗಲಾಟೆ ನಡೆದಿದೆ ಎನ್ನಲಾಗಿದೆ. ಪತಿ ಹಾಗೂ ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಅದು ವಿಕೋಪಕ್ಕೆ ಹೋಗಿದೆ ಕೊಲೆ ಸಂಭವಿಸಿದೆ. ಯಾವುದೋ ಆಯುಧದಿಂದ ಇರಿಯಲಾಗಿದೆ ಎಂದು ವರದಿಯಾಗಿದೆ.