ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅವರು ಇಟಲಿಯ ಉದ್ಯಮಿ ಎಶಾಯ್ ಎಂಬುವವರ ಜೊತೆ ಈಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅಂಜನಾ- ಎಶಾಯ್ ಮದುವೆ ನಡೆಯಲಿದೆ
ಅರ್ಜುನ್ ಅವರ ಕಿರಿಯ ಪುತ್ರಿ 25 ವರ್ಷದ ಅಂಜನಾ ಮತ್ತು ಇಟಲಿಯ ಎಶಾಯ್ ಅವರ ನಿಶ್ಚಿತಾರ್ಥದ ಫೋಟೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂಜನಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇಟಲಿಯ ಲೇಕ್ ಕೊಮೊದಲ್ಲಿ ಅಂಜನಾ ಮತ್ತು ಎಶಾಯ್ ಉಂಗುರ ಬದಲಿಸಿಕೊಂಡಿದ್ದಾರೆ. ಅಂಜನಾ ಅವರು ಕಲಾವಿದೆ ಹಾಗೂ ಫ್ಯಾಷನ್ ಡಿಸೈನರ್ ಕೂಡ ಹೌದು. ಎಶಾಯ್ ಅವರು ಇಟಲಿಯಲ್ಲಿ ಮನರಂಜನಾ ಕ್ಷೇತ್ರದ ಉದ್ಯಮಿಯಾಗಿದ್ದಾರೆ.
ಅಂಜನಾ ಹಾಗೂ ಎಶಾಯ್ ಅವರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸಕ್ಕೆ ತೆರಳಿದ್ದ ಅಂಜನಾ ಸದ್ಯ ಇಟಲಿಯಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ಅರ್ಜುನ್ ಅವರ ಹಿರಿಯ ಪುತ್ರಿ ನಟಿ ಐಶ್ವರ್ಯ ಅವರು ತಮಿಳು ನಟ ಉಮಾಪತಿ ರಾಮಯ್ಯ ಅವರನ್ನು ಮದುವೆಯಾಗಿದ್ದರು.