ಬೆಂಗಳೂರು: ಕನ್ನಡದ ಖ್ಯಾತ ಗಾಯಕಿ ಅರ್ಚನಾ ಉಡುಪಗೆ ಕ್ಯಾನ್ಸರ್ ತಗುಲಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಬಗ್ಗೆ ಈಗ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಸುದ್ದಿಗಳು ಹರಿದಾಡುತ್ತವೆ. ಇದರಲ್ಲಿ ನಿಜ ಯಾವುದು ಸುಳ್ಳು ಯಾವುದು ಎಂದೇ ಪತ್ತೆಹಚ್ಚುವುದು ಕಷ್ಟ. ಇದೀಗ ಅರ್ಚನಾ ಉಡುಪ ಆರೋಗ್ಯದ ಬಗ್ಗೆಯೂ ವದಂತಿಗಳು ಹಬ್ಬಿದ್ದವು.
ಇದರ ಬೆನ್ನಲ್ಲೇ ಅವರು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಎಲ್ಲರಿಗೂ ನಮಸ್ಕಾರ. ತುಂಬಾ ದಿನಗಳಿಂದ ಕಾಡುತ್ತಿದ್ದ ಎರಡು ಮುಖ್ಯವಾದ ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ. ಈ ವಿಡಿಯೋದಿಂದ ಉಪಯೋಗವಾಗುತ್ತದೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ಬರಬರುತ್ತ ಇದರ ಕಿರಿಕಿರಿ ಆಗುತ್ತಿರುವುದರಿಂದ ಈ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎಂದುಕೊಂಡೆ.
ಮೂರು-ನಾಲ್ಕು ವರ್ಷಗಳ ಹಿಂದೆ ಒಂದು ಸಂದರ್ಶನದಲ್ಲಿ 20 ವರ್ಷಗಳ ಹಿಂದೆ ಗಂಟಲಿನಲ್ಲಿ ಸಣ್ಣ ಸಮಸ್ಯೆ ಉಂಟಾಗಿ ತಿಂಗಳುಗಳ ಕಾಲ ನನಗೆ ಹಾಡಲು ಆಗುತ್ತಾ ಇರಲಿಲ್ಲ. ಆ ತೊಂದರೆಯಿಂದ ನಾನು ಹೇಗೆ ಹೊರಗೆ ಬಂದೆ ಎಂದು ನಾಲ್ಕು ಜನಕ್ಕೆ ಉಪಯೋಗವಾಗಲಿ ಎಂದು ಹಂಚಿಕೊಂಡೆ. ಇದನ್ನೇ ಇಟ್ಟುಕೊಂಡು ನನಗೆ ಹಾಡಲು ಆಗುತ್ತಿಲ್ಲ, ಹಾಡುವುದನ್ನು ನಿಲ್ಲಿಸಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ. ನನಗೆ ಕ್ಯಾನ್ಸರ್ ಬಂದುಬಿಟ್ಟಿದೆ ಎಂಬ ಮಟ್ಟಕ್ಕೆ ಮಾತನಾಡಲು ಶುರು ಮಾಡಿದ್ದಾರೆ. ಇದರಿಂದ ನನ್ನ ತಂದೆ-ತಾಯಿ, ಕುಟುಂಬದವರಿಗೆ ನೋವಾಗಿದೆ. ದೇವರ ದಯೆಯಿಂದ ನನಗೆ ಯಾವ ಆರೋಗ್ಯ ಸಮಸ್ಯೆಯೂ ಇಲ್ಲ ಎಂದು ಹೇಳಲು ಬಯಸುತ್ತೇನೆ ಎಂದು ಅರ್ಚನಾ ಉಡುಪ ಸ್ಪಷ್ಟನೆ ನೀಡಿದ್ದಾರೆ.