ನವದೆಹಲಿ: ನಮ್ಮ ಕನ್ನಡದ ಹೆಮ್ಮೆಯ ನಟ ಅನಂತನಾಗ್ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದರು.
ಇತ್ತೀಚೆಗಷ್ಟೇ ವಿವಿಧ ರಂಗದ ಸಾಧಕರಿಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ಪ್ರಕಟಿಸಿತ್ತು. ಅದರಲ್ಲಿ ಕನ್ನಡದ ನಟ ಅನಂತನಾಗ್ ಕೂಡಾ ಸೇರಿದ್ದರು. ಇದು ಕನ್ನಡಿಗರ ಬಹುವರ್ಷಗಳ ಕನಸಾಗಿತ್ತು. ಇದೀಗ ನೆರವೇರಿದೆ.
ಅನಂತನಾಗ್ ಗೆ ಪದ್ಮಭೂಷಣ ಘೋಷಣೆಯಾದಾಗ ಇಡೀ ಕನ್ನಡ ಚಿತ್ರರಂಗವೇ ಸಂಭ್ರಮಿಸಿತ್ತು. ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನಂತನಾಗ್ ಪ್ರಶಸ್ತಿ ಸ್ವೀಕರಿಸಿದರು.
5 ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿರುವ ಅನಂತನಾಗ್ ತಮ್ಮ ಸಹಜ ಅಭಿನಯದ ಮೂಲಕ ಅಪಾರ ಜನಮನ್ನಣೆ ಗಳಿಸಿದವರು. ಒಂದು ಕಾಲದಲ್ಲಿ ಚಾಕಲೇಟ್ ಹೀರೋ ಆಗಿದ್ದ ಅನಂತನಾಗ್ ಈಗ ಪೋಷಕ ಪಾತ್ರಗಳ ಮೂಲಕ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕನ್ನಡ ಚಿತ್ರರಂಗದ ಮೇರುನಟರಲ್ಲಿ ಒಬ್ಬರಾಗಿರುವ ಅನಂತನಾಗ್ ಗೆ ಈ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.