ಬೆಂಗಳೂರು: ಯಾಕೋ ದುನಿಯಾ ವಿಜಯ್ ಅಭಿನಯದ ಮಾಸ್ತಿ ಗುಡಿ ಸಿನಿಮಾಗೆ ವಿವಾದ ಅಂಟು ಬಿಡುವ ಹಾಗೆ ಕಾಣುತ್ತಿಲ್ಲ. ಚಿತ್ರೀಕರಣದ ವೇಳೆ ಇಬ್ಬರು ಖಳನಟರ ಸಾವಿನಿಂದ ಆರಂಭವಾದ ವಿವಾದ ಇದೀಗ ಕೃತಿ ಸಾಮ್ಯ ಹಕ್ಕು ಕಡೆಗೆ ತಿರುಗಿದೆ.
ಚಿತ್ರದಲ್ಲಿ ಬರುವ ಹಾಡೊಂದರಲ್ಲಿ ಬಳಸಿರುವ ದೃಶ್ಯ ತಮ್ಮದು ಎಂದು ಛಾಯಾಗ್ರಾಹಕ ಅಮೋಘ ವರ್ಷಾ ದೂರಿದ್ದಾರೆ. ಕರ್ನಾಟಕ ಪ್ರವಾಸೋದ್ಯಮದ ಪ್ರಚಾರಕ್ಕಾಗಿ ರಿಕಿ ಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಜಯಹೇ ಕನ್ನಡ ತಾಯೇ ಹಾಡಿನಲ್ಲಿ ಬರುವ ತಮ್ಮ ದೃಶ್ಯವನ್ನು ಮಾಸ್ತಿ ಗುಡಿ ಚಿತ್ರದಲ್ಲಿ ಒಪ್ಪಿಗೆಯಿಲ್ಲದೇ ಬಳಸಲಾಗಿದೆ ಎಂದು ಅಮೋಘ ವರ್ಷ ದೂರಿದ್ದಾರೆ.
ಇದು ನಾನು ವಿಶೇಷ ಲೆನ್ಸ್ ಬಳಸಿ ಸೆರೆಹಿಡಿದ ದೃಶ್ಯ. ಇಂತಹ ಕ್ರಿಯಾತ್ಮಕ ಕೆಲಸವನ್ನು ವ್ಯಾವಹಾರಿಕ ಉದ್ದೇಶಗಳಿಗೆ ಒಪ್ಪಿಗೆಯಿಲ್ಲದೇ ಬಳಸುವುದು ತಪ್ಪು. ಹಾಗಾಗಿ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಿರುವುದಾಗಿ ಅಮೋಘ ವರ್ಷ ಹೇಳಿದ್ದಾರೆ.