ಮುಂಬೈ: ಬಾಹುಬಲಿ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಮಹಾರಾಣಿ ಶಿವಗಾಮಿ ಪಾತ್ರಕ್ಕೆ ಮೊದಲ ಆಯ್ಕೆ ರಮ್ಯಾ ಕೃಷ್ಣ ಆಗಿರಲಿಲ್ಲ. ಬಾಲಿವುಡ್ ನಟಿ ಶ್ರೀದೇವಿಗೆ ನಿರ್ದೇಶಕ ರಾಜಮೌಳಿ ಈ ಪಾತ್ರ ನಿಭಾಯಿಸುವಂತೆ ಕೇಳಿಕೊಂಡಿದ್ದರು ಎಂಬುದು ಭಾರೀ ಸುದ್ದಿಯಾಗಿತ್ತು.
ಶ್ರೀದೇವಿ ಯಾಕೆ ಇಂತಹ ಅದ್ಭುತ ಪಾತ್ರವನ್ನು ತಿರಸ್ಕರಿಸಿದರು? ಎಂದು ಅಭಿಮಾನಿಗಳಿಂದ ಹಿಡಿದು ಖ್ಯಾತ ಸಿನಿಮಾ ನಿರ್ದೇಶಕರವರೆಗೂ ಎಲ್ಲರೂ ಪ್ರಶ್ನಿಸಿದ್ದರು. ಇದೀಗ ಸ್ವತಃ ಶ್ರೀದೇವಿ ಅದರ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಅದಾಗ ತಾನೇ ತಮಿಳಿನ ಪುಲಿ ಚಿತ್ರದಲ್ಲಿ ಐತಿಹಾಸಿಕ ಪಾತ್ರ ಮಾಡಿದ್ದರು ಶ್ರೀದೇವಿ. ಆದರೆ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಬಹುಶಃ ಇದೇ ಕಾರಣಕ್ಕೋ ಏನೋ, ಅವರು ಮತ್ತೆ ಅಂತಹ ಪಾತ್ರ ತಿರಸ್ಕರಿಸಿದರು.
ನಂತರ ಆ ಪಾತ್ರವನ್ನು ರಮ್ಯ ಕೃಷ್ಣ ಮಾಡಿ ಜನಮೆಚ್ಚುಗೆಗೆ ಪಾತ್ರರಾದರು. ಚಿತ್ರವನ್ನೂ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ‘ಇಂತಹ ಸಮಯದಲ್ಲಿ ನಾನ್ಯಾಕೆ ಆ ಪಾತ್ರ ನಿರ್ವಹಿಸಲಿಲ್ಲ ಎಂದು ಚರ್ಚೆಗಳಾಗುವ ಅಗತ್ಯವಿದೆಯೇ? ನನ್ನ ಬದಲಿಗೆ ಇನ್ನೊಬ್ಬ ನಟಿ ಆ ಪಾತ್ರ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಶ್ರೀದೇವಿ ಪ್ರತಿಕ್ರಿಯೆ ನೀಡಿದ್ದಾರೆ.