ತಮಿಳುನಾಡು: ಸಿನಿಮಾ ನಟಿಯರೆಂದರೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಸೆಲ್ಫೀ ಕೇಳುವುದು ಸಹಜ. ಆದರೆ ನಟಿ ರೋಜಾ ತಮ್ಮಲ್ಲಿ ಸೆಲ್ಫೀ ಕೇಳಿಕೊಂಡು ಬಂದ ಸ್ವಚ್ಛತಾ ಕಾರ್ಮಿಕರ ಜೊತೆ ನಡೆದುಕೊಂಡ ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನಟಿ, ರಾಜಕಾರಣಿ ರೋಜಾ ತಮಿಳುನಾಡಿನ ತಿರುಚೆಂದೂರು ಮುರುಗನ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಪತಿ ಕೂಡಾ ಇದ್ದರು. ನಟಿ ರೋಜಾರನ್ನು ನೋಡಿದ ದೇವಾಲಯ ಸಿಬ್ಬಂದಿ, ಭಕ್ತರು ಅವರ ಜೊತೆ ಸೆಲ್ಫೀಗೆ ಮುಗಿಬಿದ್ದರು. ಎಲ್ಲರಿಗೂ ರೋಜಾ ಸೆಲ್ಫೀಗೆ ಪೋಸ್ ಕೊಟ್ಟರು.
ಆದರೆ ಇಬ್ಬರು ಸ್ವಚ್ಛತಾ ಕಾರ್ಮಿಕರು ಸೆಲ್ಫೀಗಾಗಿ ಹತ್ತಿರ ಬಂದಾಗ ಕೈ ಸನ್ನೆಯಲ್ಲೇ ದೂರ ನಿಲ್ಲುವಂತೆ ಸೂಚಿಸಿದ್ದಾರೆ. ಸೆಲ್ಫೀಗಾಗಿ ನಗು ನಗುತ್ತಾ ರೋಜಾ ಬಳಿ ನಿಲ್ಲಲು ಹೊರಟ ಇಬ್ಬರು ಮಹಿಳಾ ಕಾರ್ಮಿಕರು ಪೆಚ್ಚಾಗಿದ್ದಾರೆ. ಬಳಿಕ ಸ್ವಲ್ಪ ದೂರದಲ್ಲೇ ನಿಂತು ಸೆಲ್ಫೀ ತೆಗೆಸಿಕೊಂಡಿದ್ದಾರೆ.
ರೋಜಾ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ವೈಎಸ್ ಆರ್ ಪಿ ನಾಯಕಿ ರೋಜಾ ಈಗಲೂ ಜಾತಿ, ವರ್ಣಬೇಧ ಮಾಡುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಹಲವರು ಟೀಕೆ ಮಾಡಿದ್ದಾರೆ.