Publish Date: Sun, 28 Jan 2024 (10:07 IST)
Updated Date: Sun, 28 Jan 2024 (10:09 IST)
ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕ ನಟ ನಾಗಭೂಷಣ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ನಾಗಭೂಷಣ್ ಮದುವೆಯಾಗುತ್ತಿರುವ ಹುಡುಗಿಯೂ ನಟಿ. ಪೂಜಾ ಪ್ರಕಾಶ್ ಎಂಬವರ ಜೊತೆ ನಾಗಭೂಷಣ್ ಮದುವೆಯಾಗುತ್ತಿದ್ದಾರೆ. ಹಲವು ಸಮಯದಿಂದ ಇಬ್ಬರೂ ಪ್ರೀತಿಸಿ, ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಳಗಾವಿಯಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ.
ನಾಗಭೂಷಣ್ ವಿವಾಹವಾಗಲಿರುವ ಯುವತಿ ಪೂಜಾ ಪ್ರಕಾಶ್ ಗ್ರಾಫಿಕ್ ಡಿಸೈನ್ ಮತ್ತು ಚಿತ್ರಕಲೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಂದು ವಿವಾಹ ನಡೆಯಲಿದ್ದು, ಫೆಬ್ರವರಿ 2 ರಂದು ಮೈಸೂರಿನಲ್ಲಿ ವಿವಾಹ ಆರತಕ್ಷತೆ ನಡೆಯಲಿದೆ. ಇಂದಿನ ಮದುವೆ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಸೇರಿದಂತೆ ಸಿನಿ ಸ್ನೇಹಿತರು ಭಾಗಿಯಾಗಲಿದ್ದಾರೆ.
ಇತ್ತೀಚೆಗಷ್ಟೇ ನಾಗಭೂಷಣ್ ಅಭಿನಯಿಸಿದ್ದ ಟಗರು ಪಲ್ಯ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಡಾಲಿ ಧನಂಜಯ್ ನಿರ್ಮಿಸಿದ್ದರು. ಇದೀಗ ಮತ್ತೊಂದು ಡಾಲಿ ನಿರ್ಮಾಣದ ಸಿನಿಮಾಗೂ ನಾಗಭೂಷಣ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಕೆಲವು ಸಮಯದ ಮೊದಲು ಕಾರು ಅಪಘಾತ ಮಾಡಿ ಓರ್ವ ಮಹಿಳೆಯ ಸಾವಿಗೆ ಕಾರಣರಾದ ಆರೋಪ ನಾಗಭೂಷಣ್ ಮೇಲೆ ಬಂದಿತ್ತು. ಆ ಪ್ರಕರಣ ಇನ್ನೂ ನಡೆಯುತ್ತಿದೆ. ಇದೀಗ ಅವರ ಜೀವನದಲ್ಲಿ ಸಂಗಾತಿಯ ಆಗಮನವಾಗುತ್ತಿದೆ.