ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ನಟ ದರ್ಶನ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 9ಕ್ಕೆ ಮುಂದೂಡಿದೆ. ಈ ಮೂಲಕ ಮತ್ತೇ ನಟ ದರ್ಶನ್‌ಗೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮತ್ತು ಗ್ಯಾಂಗ್‌ನ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ದರ್ಶನ್, ಪವಿತ್ರಾ ಗೌಡ ಹಾಗೂ ದರ್ಶನ್ ಅವರ ಕಾರು ಚಾಲಕನ ಪರವಾಗಿ ವಕೀಲರು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಇಂದು ತನಿಖಾಧಿಕಾರಿಗಳ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಡಿಸೆಂಬರ್ 9 ಮಧ್ಯಾಹ್ನ 2:30ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.
ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರದ್ದು, ರೇಣುಕಾಸ್ವಾಮಿ ಅಪಹರಣದಲ್ಲಾಗಲಿ, ಕೊಲೆಯಲ್ಲಾಗಲಿ ಪಾತ್ರ ಇಲ್ಲ ಎಂದು ಪವಿತ್ರಾ ಪರ ವಕೀಲ ಸೆಬಾಸ್ಟಿಯನ್ ವಾದ ಮಾಡಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು, ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದಾಗ ಅದು ಇಷ್ಟವಾಗದಿದ್ದರೆ ಆತನನ್ನು ಕೂಡಲೇ ಬ್ಲಾಕ್ ಮಾಡಬಹುದಿತ್ತು ಎಂದು ಪ್ರತಿವಾದ ಮಾಡಿದರು.
ಅಲ್ಲದೆ ಆತನ ಏಪ್ರಿಲ್ ತಿಂಗಳಿನಿಂದಲೂ ಮೆಸೇಜ್ ಮಾಡುತ್ತಿದ್ದಾನೆ ಅಂದರೆ ಆಗಿನಿಂದಲೂ ಯಾಕೆ ಬ್ಲಾಕ್ ಮಾಡಲಿಲ್ಲ. ಬದಲಿಗೆ ನನ್ನ ನಂಬರ್ ಎಂದು ಪವಿತ್ರಾಗೌಡ ಮೆಸೇಜ್ ಮಾಡಿದ್ದಾರೆ. ಬಳಿಕ ನಂಬರ್ ಅನ್ನು ಆರೋಪಿ 3 ಪವನ್ಗೆ ನೀಡಿ ಸಂಭಾಷಣೆ ನಡೆಸುವಂತೆ ಹೇಳಿದ್ದಾರೆಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ಪವಿತ್ರಾ ಕೈವಾಡವಿದೆ ಎಂದು ವಾದ ಮಂಡಿಸಿದರು.