Publish Date: Sun, 10 Mar 2024 (11:41 IST)
Updated Date: Sun, 10 Mar 2024 (11:43 IST)
ಬೆಂಗಳೂರು: ಕಾಟೇರ ಸಕ್ಸಸ್ ಬಳಿಕ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ನಟ ದರ್ಶನ್ ಇದೀಗ ಕುತ್ತಾರು ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ಮಂಗಳೂರಿನ ಕುತ್ತಾರಿನಲ್ಲಿರುವ ಕೊರಗಜ್ಜನ ಸನ್ನಿಧಾನಕ್ಕೆ ತಮ್ಮ ಸಂಗಡಿಗರೊಂದಿಗೆ ದರ್ಶನ್ ಭೇಟಿ ಕೊಟ್ಟಿದ್ದಾರೆ. ಕೊರಗಜ್ಜನ ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನಕ್ಕೆ ಇದೇ ಮೊದಲ ಬಾರಿಗೆ ದರ್ಶನ್ ಭೇಟಿ ಕೊಟ್ಟಿದ್ದಾರೆ. ಮಂಗಳೂರಿಗೆ ಹಲವು ಸಲ ಬಂದಿದ್ದೇನೆ. ಆದರೆ ಕೊರಗಜ್ಜನ ಸನ್ನಿಧಾನಕ್ಕೆ ಇದೇ ಮೊದಲ ಬಾರಿಗೆ ಭೇಟಿ ಕೊಡುತ್ತಿದ್ದೇನೆ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದೆ ಎಂದಿದ್ದಾರೆ.
ಇದರ ಹೊರತಾಗಿ ಇಲ್ಲಿಗೆ ಬರುವುದಿಕ್ಕೆ ವಿಶೇಷ ಕಾರಣವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ದರ್ಶನ್ ವಿರುದ್ಧ ಒಂದಾದ ಮೇಲೊಂದರಂತೆ ಆರೋಪ, ವಿವಾದಗಳು ಕೇಳಿಬರುತ್ತಲೇ ಇವೆ. ಇದರ ನಡುವೆ ಅವರು ದೈವದ ಮೊರೆ ಹೋಗಿದ್ದಾರೆ. ಈ ವೇಳೆ ಕ್ಷೇತ್ರದ ವತಿಯಿಂದ ಅವರಿಗೆ ಸನ್ಮಾನ ಮಾಡಲಾಯಿತು.
ಕೊರಗಜ್ಜ ಸನ್ನಿಧಾನಕ್ಕೆ ಇತ್ತೀಚೆಗೆ ಹಲವು ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯಿಂದ ಹಿಡಿದು, ಮಾಲಾಶ್ರೀ, ರಕ್ಷಿತಾ ಪ್ರೇಮ್, ಪ್ರೇಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇತ್ತೀಚೆಗಿನ ದಿನದಲ್ಲಿ ಇಲ್ಲಿಗೆ ಭೇಟಿ ನೀಡಿ ದೈವದ ಆಶೀರ್ವಾದ ಪಡೆದಿದ್ದಾರೆ.