ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನು ಪಡೆದು ಹಾಯಾಗಿದ್ದ ನಟ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ ಚಾಟಿ ಬೀಸಿದೆ. ಇಂದು ಕೋರ್ಟ್ ನಲ್ಲಿ ನ್ಯಾಯಾಧೀಶರು ಹೇಳಿದ್ದೇನು? ಇಲ್ಲಿದೆ ವಿವರ.
ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಇದರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಇಂದು ಬೇಲ್ ರದ್ದು ಮಾಡಿ ತೀರ್ಪು ಪ್ರಕಟಿಸಿದೆ. ಇದೊಂದು ಬೆಂಚ್ ಮಾರ್ಕ್ ತೀರ್ಪು ಎಂದು ಕೋರ್ಟ್ ಹೇಳಿದೆ.
ಬೆನ್ನು ನೋವಿನ ನೆಪ ಹೇಳಿ ದರ್ಶನ್ ಜಾಮೀನು ಪಡೆದುಕೊಂಡಿದ್ದರು. ಆದರೆ ಹೈಕೋರ್ಟ್ ತೀರ್ಪು ದೋಷಪೂರಿತವಾಗಿದೆ ಎಂದ ಸುಪ್ರೀಂಕೋರ್ಟ್, ಕೇವಲ ತಾಂತ್ರಿಕ ಕಾರಣ ನೀಡಿ ಜಾಮೀನು ನೀಡಲಾಗಿದೆ ಎಂದಿದ್ದಾರೆ. ಜೈಲಿನಲ್ಲಿದ್ದಾಗ ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿತ್ತು. ಇದಕ್ಕಾಗಿ ಅವರ ವಿರುದ್ಧವೂ ಕ್ರಮವಾಗಬೇಕಿತ್ತು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ, ಇನ್ನು ವ್ಯವಸ್ಥೆಯ ದುರ್ಲಾಭ ಮಾಡಿಕೊಂಡರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶ ಕೇವಲ ದರ್ಶನ್ ಮಾತ್ರವಲ್ಲ. ಪ್ರಕರಣದ 7 ಪ್ರಮುಖ ಆರೋಪಿಗಳಿಗೆ ಅನ್ವಯವಾಗಲಿದೆ. ಈ ಕಾರಣಕ್ಕೆ ದರ್ಶನ್ ಜೊತೆಗೆ ಪವಿತ್ರಾ ಗೌಡ, ಪ್ರದೋಷ್, ಅನು, ಜಗದೀಶ್, ಲಕ್ಷ್ಮಣ್ ಜಾಮೀನು ಕೂಡಾ ರದ್ದಾಗಿದ್ದು, ಎಲ್ಲರೂ ಮತ್ತೆ ಜೈಲು ಸೇರಬೇಕಾಗಿದೆ.