Photo: Twitter
ನವದೆಹಲಿ: ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭವಾಗಲಿದೆ. ಇದು ಈ ಸರ್ಕಾರದ ಕೊನೆಯ ಬಜೆಟ್ ಆಗಿದ್ದು, ಮಧ‍್ಯಂತರ ಬಜೆಟ್ ಆಗಿರಲಿದೆ. ಇನ್ನು ಕೆಲವೇ ಸಮಯದಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಮೂರು ತಿಂಗಳ ಅವಧಿಗೆ ಘೋಷಿಸಲಾಗುವ ತಾತ್ಕಾಲಿಕ ಬಜೆಟ್ ಇದಾಗಲಿದೆ.
ಇದು 6 ನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ದಾಖಲೆ ಸರಿಗಟ್ಟಲಿದ್ದಾರೆ. ಈ ಬಾರಿ ಬಜೆಟ್ ಹಂಚಿಕೆಯನ್ನು ಶೇ. 2.9 ರಿಂದ ಶೇ. 6 ಕ್ಕೆ ಏರಿಕೆ ಮಾಡುವ ನಿರೀಕ್ಷೆಯಿದೆ.
ಬಜೆಟ್ ನಲ್ಲಿ ನಿರೀಕ್ಷಿತ ಅನುದಾನಗಳು
ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜನಪರ ಬಜೆಟ್ ಘೋಷಿಸುವುದು ಗ್ಯಾರಂಟಿಯಾಗಿದೆ. ಹೀಗಾಗಿ ಎಲ್ ಪಿಜೆ, ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಕ್ರಮ ಕೈಗೊಳ್ಳಬಹುದು. ಜೊತೆಗೆ ಬೇಳೆ-ಕಾಳುಗಳು, ಅಕ್ಕಿ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಗೆ ಪಿಎಂ ಕಿಸಾನ್ ಯೋಜನೆ ಮುಂದುವರಿಕೆ ಅಥವಾ ಹೆಚ್ಚಳವಾಗಬಹುದು. ಮೂಲಸೌಕರ್ಯಾಭಿವೃದ್ಧಿ ಯೋಜನೆಗಳ ಅಭಿವೃದ್ಧಿ ಹೆಚ್ಚಿನ ಅನುದಾನ ಮೀಸಲಿಡುವ ಸಾಧ‍್ಯತೆಯಿದೆ. ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹಣ ಹಂಚಿಕೆಯಾಗಲಿದೆ. ಯುವ ಜನತೆಯನ್ನು ಸೆಳೆಯುವ ಸಲುವಾಗಿ ಡಿಜಿಟಲ್ ಆರ್ಥಿಕತೆ, ಉದ್ಯೋಗ ಹೆಚ್ಚಳ ಮಾಡುವಂತಹ ಯೋಜನೆಗಳಿಗೆ ಪ್ರೋತ್ಸಾಹ ಧನ ನೀಡುವ ಸಾಧ‍್ಯತೆಯಿದೆ.
ರಾಜ್ಯದ ನಿರೀಕ್ಷೆಗಳು
ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕೆಲವೊಂದು ಕೊಡುಗೆ ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ ಬರಗಾಲವಿರುವುದರಿಂದ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಸಿಗಬಹುದು. ಬೆಂಗಳೂರು ಉಪನಗರ, ವರ್ತುಲ ರೈಲು ಯೋಜನೆಗಳಿಗೆ ಹಣ ಸಿಗುವ ನಿರೀಕ್ಷೆ. ಇದರ ಜೊತೆಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯೋಜನೆ ಮತ್ತಷ್ಟು ವಿಸ್ತರಣೆಯಾಗುವ ಸಾಧ‍್ಯತೆ.