ಬೆಂಗಳೂರು: ದೇಶದಲ್ಲಿ ದಿನೇ ದಿನೇ ಬೆಳ್ಳುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ರೈತರಿಗೆ ತಮ್ಮ ಬೆಳೆ ಕಳುವಾಗದಂತೆ ಕಾಯುವುದೇ ದೊಡ್ಡ ಸವಾಲಾಗಿದೆ.
ಬೆಳ್ಳುಳ್ಳಿ ಬೆಲೆ ಮಹಾರಾಷ್ಟ್ರಲ್ಲಿ 600 ರೂ. ಗಡಿ ದಾಟಿದೆ. ಹೀಗಾಗಿ ಬೆಳ್ಳುಳ್ಳಿಗೆ ಚಿನ್ನದ ಬೆಲೆ ಬಂದಿದೆ. ಇದೀಗ ಬೆಳೆ ಬೆಳೆದ ರೈತ ತನ್ನ ಫಸಲು ಕಳುವಾಗದಂತೆ ಕಾವಲು ಕಾಯಲು ಸಿಸಿಟಿವಿ ಮೊರೆ ಹೋಗಿದ್ದಾನೆ! ಬೆಳ್ಳುಳ‍್ಳಿ ಬೆಲೆ ಹೆಚ್ಚಾದಂತೇ ಕೆಲವೆಡೆ ಕಳ್ಳತನ ಪ್ರಕರಣಗಳು ಕಂಡುಬಂದಿದ್ದವು. ಈ ಹಿನ್ನಲೆಯಲ್ಲಿ ಮಧ‍್ಯಪ್ರದೇಶದಲ್ಲಿ ಕೆಲವು ರೈತರು ತಮ್ಮ ಬೆಳೆ ಕಾಯಲು ಸಿಸಿಟಿವಿ ಕ್ಯಾಮರಾ ಹಾಕಿಸಿಕೊಂಡಿದ್ದಾರೆ.
ಕೆಲವು ಸಮಯ ಮೊದಲು ಈರುಳ್ಳಿ, ಟೊಮೆಟೊ ಬೆಲೆ ಗಗನಕ್ಕೇರಿತ್ತು. ಇದೀಗ ಬೆಳ್ಳುಳ್ಳಿ ಸರದಿ. ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿಯನ್ನು ಬಿಡುವಂತೆಯೂ ಇಲ್ಲ, ಖರೀದಿಸುವಂತೆಯೂ ಇಲ್ಲ ಎಂಬ ಸ್ಥಿತಿ ಗ್ರಾಹಕರದ್ದಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಬೆಳ್ಳುಳ್ಳಿಗೆ ಈ ಮಟ್ಟಿಗೆ ಬೆಲೆ ಏರಿಕೆಯಾಗಿದ್ದ ಉದಾಹರಣೆಯೇ ಇಲ್ಲ.
ಇದೀಗ ಬೆಳ್ಳುಳ್ಳಿಗೆ ಬೆಲೆ ಬಂದಿರುವುದರಿಂದ ರೈತರೂ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಕೆಲವು ದಿನದ ನಂತರ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ ಅಲ್ಲಿಯವರೆಗೆ ತಮ್ಮ ಬೆಳೆ ಕಳುವಾಗದಂತೆ ತಡೆಯುವುದೇ ರೈತರಿಗೆ ದೊಡ್ಡ ತಲೆನೋವಾಗಿದೆ.