ಆಹಾರ ಪದಾರ್ಥಗಳು, ಬೇಳೆಕಾಳುಗಳು ಮತ್ತಿತರ ಅವಶ್ಯಕ ವಸ್ತುಗಳ ದರ ಗಗನಕ್ಕೇರುತ್ತಿದೆ. ಜನಸಾಮಾನ್ಯರಿಗೆ ಇದರ ಬಿಸಿ ತಟ್ಟುತ್ತಿದ್ದು, ದರಗಳ ಏರಿಕೆಯಿಂದ ಕಂಗಾಲಾಗಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಬೇಳೆಕಾಳುಗಳು ಮತ್ತಿತರ ಅವಶ್ಯಕ ವಸ್ತುಗಳ ದರ ಏರಿಕೆಯನ್ನು ಜಂಟಿಯಾಗಿ ನಿಭಾಯಿಸಲು ಮೇ 21ರಂದು ರಾಜ್ಯ ಆಹಾರ ಸಚಿವರ ಸಭೆಯನ್ನು ಕರೆದಿದೆ.
ಇಡೀ ದಿನ ನಡೆಯುವ ಸಭೆಯಲ್ಲಿ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ವಾಣಿಜ್ಯ ಸಚಿವ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಸಭೆಯಲ್ಲಿ ಆಹಾರ ಪದಾರ್ಥಗಳ ದರ ಏರಿಕೆ ಹತೋಟಿಗೆ ತರುವ ಕಾರ್ಯಯೋಜನೆ, ದರ ನಿಗಾ ವ್ಯವಸ್ಥೆ ಬಲಪಡಿಸುವುದು, ಕಾಳಸಂತೆ ತಡೆಯಲು ಸಮನ್ವಯದ ಕಾರ್ಯತಂತ್ರ ಮತ್ತು ದರ ಸ್ಥಿರತೆಯ ನಿಧಿಯ ಬಳಕೆ ಕುರಿತು ಚರ್ಚಿಸಲಾಗುತ್ತದೆ.
ಬೇಳೆಕಾಳುಗಳ ದರ ದೇಶದ ಕೆಲವು ಭಾಗಗಳಲ್ಲಿ ಈಗಲೂ ಕೆಜಿಗೆ 190ರೂ.ಗೆ ಮಾರಾಟವಾಗುತ್ತಿದೆ.
ಕಳಪೆ ಮುಂಗಾರಿನಿಂದ ದೇಶೀಯ ಉತ್ಪಾದನೆಯಲ್ಲಿ ಕುಸಿತವಾಗಿದ್ದೇ ಬೇಳೆಕಾಳುಗಳ ದರ ಹೆಚ್ಚಳಕ್ಕೆ ಕಾರಣ. ಇದಲ್ಲದೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದ ಪುನರ್ಪರಿಶೀಲನೆ ನಡೆಸಲಿದೆ. ಇದನ್ನು 33 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ.