ದುಬೈ: ಐಪಿಎಲ್ ನಲ್ಲಿ ಒಂದಾದರೂ ಟ್ರೋಫಿ ಗೆಲ್ಲುವ ಕನಸು ವಿರಾಟ್ ಕೊಹ್ಲಿ ಪಾಲಿಗೆ ಕನಸಾಗಿಯೇ ಉಳಿಯಿತು. ನಿನ್ನೆಯ ಸೋಲಿನ ಬಳಿಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿಗೆ ಬೆಂಬಲ ಸೂಚಿಸಿದ್ದಾರೆ.
50 ಸಲ ಸೋತರೂ ಆರ್ ಸಿಬಿಗೇ ನಮ್ಮ ಸಪೋರ್ಟ್ ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದ್ದಾರೆ. ಇನ್ನು, ವಿರಾಟ್ ಕೊಹ್ಲಿಗೆ ವಿದಾಯ ಹೇಳಿದ್ದಾರೆ.
ಇನ್ನು, ಕೊನೆಯ ಪಂದ್ಯದಲ್ಲಿ ಭಾವುಕರಾದ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಬಾರಿಯಾದರೂ ಗೆದ್ದು ವಿದಾಯ ಹೇಳಬೇಕೆಂದು ಬಯಸಿದ್ದ ಕೊಹ್ಲಿಗೆ ನಿನ್ನೆ ನಿರಾಸೆಯಾಗಿತ್ತು. ಅಲ್ಲದೆ ನಾಯಕರಾಗಿ ಆರ್ ಸಿಬಿಯಲ್ಲಿ ಕೊನೆಯ ಪಂದ್ಯವಾಗಿತ್ತು. ಇವೆರಡೂ ದುಃಖದಿಂದ ಅವರ ಕಣ್ಣು ತುಂಬಿ ಬಂದಿತ್ತು. ಈ ಕ್ಷಣಗಳು ಅಭಿಮಾನಿಗಳ ಕಣ್ಣಲ್ಲೂ ನೀರು ತರಿಸಿದೆ.
ಪಂದ್ಯದ ಬಳಿಕ ವಿದಾಯ ಭಾಷಣ ಮಾಡಿರುವ ಕೊಹ್ಲಿ, ನಾನು ಎಂದೆಂದಿಗೂ ಆರ್ ಸಿಬಿ ಪರವಾಗಿಯೇ ಆಡುತ್ತೇನೆ. ನನಗೆ ವಿಧೇಯತೆಯೇ ಮುಖ್ಯ. ಈ ಫ್ರಾಂಚೈಸಿ ನನ್ನ ಮೇಲೆ ಭರವಸೆಯಿಟ್ಟಿತ್ತು. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ಈ ತಂಡಕ್ಕೆ ನನ್ನ ಬದ್ಧತೆಯಿರುತ್ತದೆ ಎಂದಿದ್ದಾರೆ.