Publish Date: Sat, 29 Aug 2020 (11:39 IST)
Updated Date: Sat, 29 Aug 2020 (11:41 IST)
ದುಬೈ: ಕೊರೋನಾ ಸೋಂಕಿನಿಂದ ತಲ್ಲಣಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಪ್ರಮುಖ ಬ್ಯಾಟ್ಸ್ ಮನ್ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಅವರೀಗ ಭಾರತಕ್ಕೆ ವಾಪಸಾಗುತ್ತಿದ್ದಾರೆ ಎಂದು ಚೆನ್ನೈ ತಂಡ ಅಧಿಕೃತ ಪ್ರಕಟಣೆ ತಿಳಿಸಿದೆ. ಆದರೆ ಅವರು ಟೂರ್ನಿಯಿಂದ ಹಿಂದಕ್ಕೆ ಸರಿಯಲು ನಿಜ ಕಾರಣವೇನೆಂದು ತಿಳಿದುಬಂದಿಲ್ಲ. ಕಳೆದ ವಾರ ತಂಡದ ಜತೆಗೆ ಅವರೂ ದುಬೈಗೆ ಪ್ರಯಾಣ ಬೆಳೆಸಿ ಕ್ವಾರಂಟೈನ್ ನಲ್ಲಿದ್ದರು. ಆಗಾಗ ವರ್ಕೌಟ್ ವಿಡಿಯೋ ಪ್ರಕಟಿಸುವ ಮೂಲಕ ಐಪಿಎಲ್ ಗೆ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಧೋನಿ ಜತೆಗೆ ತಾವೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದರು. ಹೀಗಾಗಿ ಈ ಐಪಿಎಲ್ ನಲ್ಲಿ ಚೆನ್ನಾಗಿ ಆಡಿ ಪ್ರೇಕ್ಷಕರನ್ನು ರಂಜಿಸಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಅದೆಲ್ಲವೂ ಈಗ ತಲೆಕೆಳಗಾಗಿದೆ.