ಮುಂಬೈ: ಐಪಿಎಲ್‌ನ ನಿರ್ಣಾಯಕ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದೆ.
ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಸ್ತುವಾರಿ ನಾಯಕ ಫಫ್ ಡುಪ್ಲೆಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯ ಪ್ಲೇ-ಆಫ್ ಹಂತಕ್ಕೆ ಮೂರು ತಂಡಗಳು ಈಗಾಗಲೇ ಪ್ರವೇಶಿಸಿವೆ. ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್‌ಗೆ ಮುನ್ನಡೆದಿವೆ. ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಹಾಗೂ ಡೆಲ್ಲಿ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ಸದ್ಯ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡವು 13 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಉಭಯ ತಂಡಗಳ ಪಾಲಿಗೆ ತಲಾ ಎರಡು ಪಂದ್ಯಗಳು ಉಳಿದಿವೆ. ಅದರಲ್ಲಿ ಡೆಲ್ಲಿ ತಂಡವು ಎರಡೂ ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಖಚಿತ.
ಈ ಹಾದಿಯಲ್ಲಿ ಮೊದಲಿಗೆ ಡೆಲ್ಲಿ ತಂಡವು ಮುಂಬೈ ವಿರುದ್ಧ ನಂತರ ಪಂಜಾಬ್ ಕಿಂಗ್ಸ್ (ಮೇ 24) ವಿರುದ್ಧ ಜಯಿಸಬೇಕು. ಬುಧವಾರ ಒಂದೊಮ್ಮೆ ಡೆಲ್ಲಿ ಸೋತರೆ, ಮುಂಬೈ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಆದ್ದರಿಂದ ಮುಂಬೈ ಎದುರಿನ ಪಂದ್ಯವು ಡೆಲ್ಲಿಗೆ ಮಾಡು ಇಲ್ಲವೇ ಮಡಿ ಎಂಬಂತಿದೆ.