ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ತವರಿನಲ್ಲಿ ಮತ್ತೆ ಮುಗ್ಗರಿಸಿದೆ. ಕೆಲ ದಿನಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪರಾಭವಗೊಂಡಿದ್ದ ಡೆಲ್ಲಿ ತಂಡವು ಮಂಗಳವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋತಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ರನ್ ಗಳ ಸೋಲು ಕಂಡಿತು. ಕೋಲ್ಕತಾ ನೀಡಿದ 205 ರನ್ ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 14ರನ್ ಗಳ ಅಂತರದಲ್ಲಿ ಅಂತರದ ಸೋಲು ಕಂಡಿತು.
ಡೆಲ್ಲಿ ಪರ ಆರ್ ಸಿಬಿ ಮಾಜಿ ನಾಯಕ ಫಾಪ್ ಡುಪ್ಲೆಸಿಸ್ 62 ರನ್, ನಾಯಕ ಅಕ್ಸರ್ ಪಟೇಲ್ 43 ರನ್ ಹಾಗೂ ಅಂತಿಮ ಹಂತದಲ್ಲಿ ವಿಪ್ರಾಜ್ ನಿಗಮ್ 38 ರನ್ ಗಳಿಸಿದರು. ಆದರೆ ತಂಡದ ಇತರೆ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.
ಆರಂಭಿಕ ಆಟಗಾರ ಅಭಿಷೇಕ್ ಪೊರೆಲ್ 4 ರನ್ ಗಳಿಸಿ ಔಟಾದರೆ, ಕರುಣ್ ನಾಯರ್ 15 ರನ್ ಗಳಿಸಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ 7 ರನ್ ಗಳಿಸಿ ಸುನಿಲ್ ನರೈನ್ ರ ಅದ್ಭುತ ರನೌಟ್ ಗೆ ಬಲಿಯಾದರು.
ಕೆಳ ಕ್ರಮಾಂಕದಲ್ಲಿ ವಿಪ್ರಾಜ್ ನಿಗಮ್ ಹೊರತು ಪಡಿಸದರೆ ಉಳಿದಾವ ಆಟಗಾರರಿಂದಲೂ ನಿರೀಕ್ಷಿತ ರನ್ ಗಳು ಬರಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ 1, ಆಶುತೋಶ್ ಶರ್ಮಾ 7, ಮಿಚೆಲ್ ಸ್ಟಾರ್ಕ್ ಶೂನ್ಯ ಸುತ್ತಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 190 ರನ್ ಗಳನ್ನಷ್ಟೇ ಗಳಿಸಿ, 14ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಡೆಲ್ಲಿ ಕಾಪಿಟಲ್ಸ್ ಗೆ ಇದು ತವರಿನಲ್ಲಿ ಸತತ 2ನೇ ಸೋಲಾಗಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ತಂಡ ಒಟ್ಟು 4 ಪಂದ್ಯಗಳನ್ನಾಡಿದ್ದು ಈ ಪೈಕಿ 1ರಲ್ಲಿ (ಸೂಪರ್ ಓವರ್) ಗೆಲುವು, 3ರಲ್ಲಿ ಸೋಲು ಕಂಡಿದೆ. ಅಂತೆಯೇ ಹೊರಗಿನ ಕ್ರೀಡಾಂಗಣಗಳಲ್ಲಿ 6 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆಲುವು ಒಂದು ಪಂದ್ಯದಲ್ಲಿ ಸೋಲು ಕಂಡಿದೆ.