Publish Date: Wed, 27 Mar 2019 (09:06 IST)
Updated Date: Wed, 27 Mar 2019 (09:07 IST)
ನವದೆಹಲಿ: ಈ ಐಪಿಎಲ್ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಧೋನಿ ಪಡೆ 6 ವಿಕೆಟ್ ಗಳ ಗೆಲುವು ದಾಖಲಿಸಿದೆ. ಧೋನಿ ಅಜೇಯರಾಗಿ 32 ರನ್ ಬಾರಿಸಿ ಕೊನೆಯವರೆಗೂ ಕ್ರೀಸ್ ನಲ್ಲಿ ಉಳಿದು ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತ್ತು. ಚೆನ್ನೈ ಪರ ಡ್ವಾನ್ ಬ್ರಾವೋ ಮಾರಕ ದಾಳಿ ಸಂಘಟಿಸಿ 3 ವಿಕೆಟ್ ಕಿತ್ತರು. ಈ ಸಾಧಾರಣ ಮೊತ್ತ ಬೆನ್ನತ್ತುವುದು ಸಿಎಸ್ ಕೆ ಸುಲಭವಾಗಲಿಲ್ಲ.
ಆರಂಭದಲ್ಲಿಯೇ ಅಂಬಟಿ ರಾಯುಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ರನ್ ಕೂಡಾ ಅಷ್ಟೊಂದು ಹರಿದುಬರುತ್ತಿರಲಿಲ್ಲ. ಇನ್ನೊಬ್ಬ ಆರಂಭಿಕ ಶೇನ್ ವ್ಯಾಟ್ಸನ್ 44 ರನ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ 30 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಬಳಿಕ ಧೋನಿ ತಂಡವನ್ನು ಎಚ್ಚರಿಕೆಯಿಂದ ಗೆಲುವಿನ ದಡ ಮುಟ್ಟಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ