Publish Date: Tue, 17 May 2022 (13:25 IST)
Updated Date: Tue, 17 May 2022 (11:47 IST)
ಪ್ಯಾರಿಸ್ : ಭಾರತದಲ್ಲಿ ಗೋಧಿ ರಫ್ತುವನ್ನು ನಿಷೇಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.
ಭಾರತದಲ್ಲಿ ಉಷ್ಣತೆಯಲ್ಲಿ ಏರಿಕೆ ಕಂಡಿದ್ದರಿಂದ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿತ್ತು.
ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿತ್ತು. ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ತರಾಟೆಗೆ ತೆಗೆದುಕೊಂಡಿದೆ. ಆದರೆ ಭಾರತದಲ್ಲಿ ಗೋಧಿಯ ರಫ್ತು ನಿಷೇಧ ಮಾಡಿರುವುದಕ್ಕೆ ಚೀನಾ ಬೆಂಬಲ ನೀಡಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಸರಿಯಲ್ಲ. G7 ರಾಷ್ಟ್ರಗಳು ತಮ್ಮ ರಫ್ತುಗಳನ್ನು ಹೆಚ್ಚಿಸುವ ಮೂಲಕ ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸಲು ಏಕೆ ಮುಂದಾಗುವುದಿಲ್ಲ ಎಂದು ಚೀನಾ ಪ್ರಶ್ನಿಸಿದೆ.