ನವದೆಹಲಿ: ನಿನ್ನೆ ಲಾಹೋರ್ ನಲ್ಲಿ ಮತ್ತದೇ ಅಜ್ಞಾತ ಗನ್ ಮ್ಯಾನ್ ಗಳು ಭಾರತ ವಿರೋಧಿ ಕೆಲಸ ಮಾಡುತ್ತಿದ್ದು, ಭಾರತದ ಅಮಾಯಕ ಪ್ರಜೆ ಸರಬ್ಜಿತ್ ಸಿಂಗ್ ನನ್ನು ಕೊಂದಿದ್ದ ಆರೋಪಿ ಅಮೀರ್ ಸರ್ಫರಾಜ್ ತಂಬಾನನ್ನು ಕೊಂದು ಹಾಕಿದ್ದರು.
ಇತ್ತೀಚೆಗೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅನೇಕ ಉಗ್ರರನ್ನು ಅಜ್ಞಾತ ಗನ್ ಮೆನ್ ಗಳು ಗುಂಡಿಕ್ಕಿ ಕೊಲೆ ಮಾಡಿದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ಭಾರತದ ಗುಪ್ತಚರ ಏಜೆಂಟ್ ಗಳೇ ಮಾಡಿಸುತ್ತಿದ್ದಾರೆ ಎಂಬ ಗುಸು ಗುಸು ಇದೆ. ಆದರೆ ಭಾರತ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಬಾಯ್ಬಿಟ್ಟಿಲ್ಲ.
ಅದರಂತೆ ಇದೀಗ ಪಾಕಿಸ್ತಾನದ ಲಾಹೋರ್ ನಲ್ಲಿ ಬೈಕ್ ನಲ್ಲಿ ಬಂದ ಬಂದೂಕು ಧಾರಿಗಳು ಅಮೀರ್ ನನ್ನು ಹೊಡೆದು ಹಾಕಿವೆ. ಅಷ್ಟಕ್ಕೂ ಈ ಅಮೀರ್ ಯಾರು? ಸರಬ್ಜಿತ್ ಸಿಂಗ್ ಯಾರು ಎಂದು ಮೆಲುಕು ಹಾಕೋಣ. ಬಹುಶಃ ಕೆಲವರಿಗೆ ಸರಬ್ಜಿತ್ ಸಿಂಗ್ ನನ್ನು ಮರೆತೇ ಹೋಗಿರಬಹುದು.
ಕೆಲವು ವರ್ಷಗಳ ಹಿಂದೆ ಈತನ ಪ್ರಕರಣ ಭಾರತ-ಪಾಕಿಸ್ತಾನ ನಡುವೆ ಭಾರೀ ಸುದ್ದಿ ಮಾಡಿತ್ತು. ಪಂಜಾಬ್ ನ ಕೃಷಿಕನಾಗಿದ್ದ ಈತ ಅರಿವಿಲ್ಲದೇ ಗಡಿ ದಾಟಿ ಪಾಕಿಸ್ತಾನ ನೆಲ ತಲುಪಿದ್ದ. ಈತನನ್ನು ಗುಪ್ತಚರ ಏಜೆಂಟ್ ಆರೋಪ ಹೊರಿಸಿ ಪಾಕ್ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದರು. 1991 ರಲ್ಲಿ ಈತನಿಗೆ ಪಾಕಿಸ್ತಾನದ ಕೋರ್ಟ್ ಗಲ್ಲು ಶಿಕ್ಷೆ ಘೋಷಿಸಿತ್ತು. ಸುಮಾರು 22 ವರ್ಷ ಸರಬ್ಜಿತ್ ಪಾಕ್ ಜೈಲಿನಲ್ಲಿ ಬಂಧಿಯಾಗಿದ್ದ. 2013 ರಲ್ಲಿ ಈತನ ಮೇಲೆ ಸಹ ಜೈಲು ವಾಸಿ ಅಮೀರ್ ಮತ್ತು ಸಹಚರರು ಕಲ್ಲಿನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದರು.
ಕೋಮಾ ಸ್ಥಿತಿಯಲ್ಲಿದ್ದ ಈಗ ಲಾಹೋರ್ ನ ಜಿನ್ನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆತನ ಸಾವಿಗೆ ಇಡೀ ಭಾರತವೇ ಕಂಬನಿ ಮಿಡಿದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೀರ್ ಮತ್ತು ಆತನ ಸಹಚರ ಮುದಾಸರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂಬ ನೆಪವೊಡ್ಡಿ ಇವರಿಬ್ಬರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು. ಇದೀಗ ಅದೇ ಆರೋಪಿಗಳಿಗೆ ಅಪರಿಚಿತ ಬಂಧೂಕುಧಾರಿಗಳು ಶಿಕ್ಷೆ ಕೊಟ್ಟಿದ್ದಾರೆ.