ಮಾಸ್ಕೋ : ಉಕ್ರೇನ್ನೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಇನ್ಫೋಸಿಸ್ ಲಿಮಿಟೆಡ್ ಕಂಪನಿ ರಷ್ಯಾದಿಂದ ಹೊರನಡೆದಿದೆ.
ಯುದ್ಧದ ಕಾರಣದಿಂದ ಇನ್ಫೋಸಿಸ್ ರಷ್ಯಾದಲ್ಲಿದ್ದ ತನ್ನ ವ್ಯವಹಾರಗಳನ್ನು ಸ್ಥಳಾಂತರಿಸುತ್ತಿದ್ದು, ಪರ್ಯಾಯ ಆಯ್ಕೆಯನ್ನು ಹುಡುಕುತ್ತಿದೆ ಎಂದು ತಿಳಿಸಿದೆ.
ಒರಾಕಲ್ ಹಾಗೂ ಸ್ಯಾಪ್ ಸೇರಿದಂತೆ ಹಲವಾರು ಇತರ ಐಟಿ ಹಾಗೂ ಸಾಫ್ಟ್ವೇರ್ ಕಂಪನಿಗಳು ರಷ್ಯಾದಲ್ಲಿ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿವೆ. ಇದೀಗ ಭಾರತದ ಇನ್ಫೋಸಿಸ್ ರಷ್ಯಾವನ್ನು ತೊರೆಯಲು ನಿರ್ಧರಿಸಿದೆ.
ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಣಾಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಇನ್ಫೋಸಿಸ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್, ಪರಿಸ್ಥಿತಿಯನ್ನು ನೋಡಿದಾಗ ನಾವು ನಮ್ಮ ವ್ಯವಹಾರಗಳನ್ನು ರಷ್ಯಾದಿಂದ ಬೇರೆಡೆಗೆ ಬದಲಾಯಿಸಲು ಪ್ರಾರಂಭಿಸಿದ್ದೇವೆ ಎಂದರು.
ರಷ್ಯಾದಲ್ಲಿ ನಮಗೆ ಗ್ರಾಹಕರು ಇಲ್ಲ. ನಾವೀಗ ರಷ್ಯಾದಲ್ಲಿ ಮಾಡುತ್ತಿರುವ ಕೆಲಸಗಳನ್ನು ಜಾಗತಿಕವಾಗಿ ವಿಸ್ತರಿಸಲು ಮುಂದಾಗಿದ್ದೇವೆ. ರಷ್ಯಾ-ಉಕ್ರೇನ್ನ ಸಂಘರ್ಷದ ಬಗ್ಗೆ ನಮಗೆ ಚಿಂತೆ ಇದೆ. ಹೀಗಾಗಿ ನಮ್ಮ ಉದ್ಯೋಗಿಗಳನ್ನು ರಷ್ಯಾದಿಂದ ಇತರ ದೇಶಗಳಿಗೆ, ವಿಶೇಷವಾಗಿ ಪೂರ್ವ ಯುರೋಪ್ಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.