Select Your Language

Notifications

webdunia
webdunia
webdunia
webdunia

ಆಪರೇಷನ್ ಸಿಂಧೂರ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ: ಟ್ರಂಪ್‌ಗೆ ಪ್ರಧಾನಿ ಮೋದಿ ಮನವರಿಕೆ

Operation Sindura, Prime Minister Narendra Modi, US President Donald Trump

Sampriya

ಕೆನಡಾ , ಬುಧವಾರ, 18 ಜೂನ್ 2025 (14:44 IST)
Photo Credit X
ಕೆನಡಾ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ‌ಪಾಕಿಸ್ತಾನದ ವಿನಂತಿಯ ಮೇರೆಗೆ ವಿರಾಮ ಹಾಕಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಸಂಭಾಷಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್‌ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ವಿವಿಧೆಡೆ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ನಂತರ ಎರಡೂ  ದೇಶಗಳಿಂದ ದಾಳಿ– ಪ್ರತಿದಾಳಿ ನಡೆಯಿತು. ಬಳಿಕ, ಉಭಯ ರಾಷ್ಟ್ರಗಳು ಮಾತುಕತೆ ಮೂಲಕ ಯುದ್ಧ ವಿರಾಮ ಘೋಷಿಸಿದ್ದವು.

ಆಪರೇಷನ್ ಸಿಂಧೂರಕ್ಕೆ ವಿರಾಮ ಹಾಕಿದ ನಂತರ ಟ್ರಂಪ್ ಮತ್ತು ಮೋದಿ ನಡುವಿನ ಮೊದಲ ಸಂಭಾಷಣೆ ಇದಾಗಿತ್ತು. ಮಂಗಳವಾರ ಟ್ರಂಪ್ ಅವರೊಂದಿಗೆ 35 ನಿಮಿಷಗಳ ಕಾಲ ಮೋದಿ ದೂರವಾಣಿಯಲ್ಲಿ ಮಾತನಾಡಿದರು. ಪಾಕ್‌ ಮನವಿಯನ್ನು ಸ್ವೀಕರಿಸಿ ವಿರಾಮ ಹಾಕಲಾಯಿತೇ ಹೊರತು, ಅಮೆರಿಕದ ಮಧ್ಯಸ್ಥಿಕೆ ಅಥವಾ ವ್ಯಾಪಾರ ಒಪ್ಪಂದದಿಂದಾಗಿ ಅಲ್ಲ ಎಂದು ತಿಳಿಸಿದ್ದಾರೆ. 

ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ವಿರುದ್ಧ ಭಾರತ ಪ್ರಾರಂಭಿಸಿದ್ದ ಆಪರೇಷನ್ ಸಿಂಧೂರದ ಬಗ್ಗೆ ಮೋದಿ ಅವರು ಟ್ರಂಪ್‌ಗೆ ವಿವರಿಸಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಭವಿಷ್ಯದಲ್ಲಿ ಅಂತಹ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ ನೀಡಿದ್ದಾರೆ. 

ಜಿ-7 ಸಭೆಯಲ್ಲಿ ಭಾಗವಹಿಸಲು ಕೆನಡಾಗೆ ಬಂದಿದ್ದ ಮೋದಿ ಅವರನ್ನು ಹಿಂದಿರುಗುವ ವೇಳೆ ಅಮೆರಿಕಕ್ಕೆ ಭೇಟಿ ನೀಡುವಂತೆ ಟ್ರಂಪ್ ಆಹ್ವಾನಿಸಿದ್ದರು ಎಂದು ಅವರು ಹೇಳಿದ್ದಾರೆ. ಆದರೆ, ಮೊದಲೇ ನಿಗದಿಯಾಗಿದ್ದ ಪ್ರವಾಸದ ವೇಳಾಪಟ್ಟಿಯಿಂದಾಗಿ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಮೋದಿ, ಟ್ರಂಪ್ ಅವರನ್ನು ಆಹ್ವಾನಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ಸಂಚರಿಸುವಾಗ ಹುಷಾರ್: ದರೋಡೆ ಗ್ಯಾಂಗ್ ವಿಡಿಯೋ ವೈರಲ್