ವಿಶ್ವಸಂಸ್ಥೆ: ಇರಾನ್‌ನ ಅಣುಸ್ಥಾವರಗಳ ಮೇಲೆ ಅಮೆರಿಕ ನಡೆಸಿರುವ ಏರ್‌ಸ್ಟ್ರೇಕ್ ಅನ್ನು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ ಎಂದು ಎಚ್ಚರಿಸಿದೆ.
ಇಸ್ರೇಲ್-ಇರಾನ್ ನಡುವಿನ ಸಂಘರ್ಷದಲ್ಲಿ ಇದೀಗ ಅಮೆರಿಕಾ ಎಂಟ್ರಿಯಾಗಿದೆ. ಇಸ್ರೇಲ್‌ಗೆ ಬೆನ್ನೆಲುಬಾಗಿ ನಿಂತಿರುವ ಅಮೆರಿಕಾ ಶನಿವಾರ ರಾತ್ರಿ ಇರಾನ್‌ನ ಮೂರು ಪರಮಾಣು ಸ್ಥಾವರಗಳನ್ನು ಉಡೀಸ್ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಇರಾನ್ ಮೇಲೆ ಅಮೆರಿಕಾ ಬಲಪ್ರಯೋಗ ತೀವ್ರ ಆಘಾತ ತಂದಿದೆ. ಈಗಾಗಲೇ ಸಂಘರ್ಷದಲ್ಲಿರುವ ಪ್ರದೇಶದಲ್ಲಿ ಈ ಬೆಳವಣಿಗೆ ಪರಿಸ್ಥಿತಿ ನಿಯಂತ್ರಣ ತಪ್ಪುವಂತೆ ಮಾಡಲಿದೆ. ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಉದ್ವಿಗ್ನ ಪರಿಸ್ಥಿತಿಯು ನಿಯಂತ್ರಣ ತಪ್ಪುವ ಅಪಾಯವನ್ನು ಹೆಚ್ಚಿಸುತ್ತಿದೆ. ನಾಗರಿಕರ ಮತ್ತು ಜಗತ್ತಿನ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಸದಸ್ಯ ರಾಷ್ಟ್ರಗಳು ಉಲ್ಬಣವನ್ನು ಕಡಿಮೆ ಮಾಡಲು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಇತರ ನಿಯಮಗಳ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಎತ್ತಿಹಿಡಿಯಬೇಕು. ಮುಂದಿನ ಏಕೈಕ ಮಾರ್ಗ ರಾಜತಾಂತ್ರಿಕತೆಯಾಗಿದೆ ಎಂದು ಒತ್ತಿ ಹೇಳಿದ್ದಾರೆ.