ಈವರೆಗೆ ಸಿಗರೇಟ್(ಧೂಮಪಾನ) ಸೇದುವುದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆ ಬರುತ್ತದೆ ಎಂದು ಕೇಳಿದ್ದೇವು. ಆದರೆ ಇತ್ತೀಚಿಗೆ ಕೈಗೊಂಡ ಸಂಶೋಧನೆಯೊಂದು ಅದು ನಿಮ್ಮ ಡಿಎನ್ಎ(ಅನುವಂಶಿಕ)ಯನ್ನೇ ಬದಲಾಯಿಸಬಲ್ಲದು ಎಂಬ ಶಾಕಿಂಗ್ ಸುದ್ದಿಯನ್ನು ತಂದಿದೆ! ಎಚ್ಚರ....!
ಇಂತಹ ಭಯಾನಕ ವರದಿಯೊಂದನ್ನು ಅಮೆರಿಕಾದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್ ಆರೋಗ್ಯ ಸಂಶೋಧಕರು ಹೊರಹಾಕಿದ್ದಾರೆ. ಧೂಮಪಾನದಿಂದ ಹೃದಯ ಖಾಯಿಲೆ, ಶ್ವಾಸಕೋಶದ ಕಾಯಿಲೆಗೆ ಒಳಗಾಗುವುದರ ಜೊತೆಗೆ ಮತ್ತೇನಾದರೂ ಸಮಸ್ಯೆ ಎದುರಾಗುತ್ತದೆಯೇ ಎಂದು ಸಂಶೋಧಕರ ತಂಡ ಚಿಂತನೆ ನಡೆಸಿತ್ತು. ಸಂದರ್ಭದಲ್ಲಿ ಅವರು ಅನುವಂಶಿಕ ಮೇಲೆ ಸಿಗರೇಟ್ (ಡಿಎನ್ಎ) ಯಾವ ರೀತಿ ಪರಿಣಾಮ ಬರುತ್ತದೆ ಎನ್ನುವುದರ ಕುರಿತು ಸಂಶೋಧನೆ ನಡೆಸಿದರೆ ಹೇಗೆ ಎಂದು ಒಮ್ಮತದ ನಿರ್ಧಾರಕ್ಕೆ ಬಂದು ಸಂಶೋಧನೆ ಕೈಗೊಂಡಿದ್ದರು.
ಆರೋಗ್ಯ ಸಂಶೋಧಕರು ಅಮೆರಿಕಾದ ಸುಮಾರು 16 ಸಾವಿರ ಧೂಮಪಾನಿಗಳನ್ನು 16 ವಿಧದ ಪರೀಕ್ಷೆಗೆ ಒಳಪಡಿಸಿ,ವರದಿಯನ್ನು ತಯಾರಿಸಿದ್ದಾರೆ. ಇದರಿಂದ ಬಂದ ಫಲಿತಾಂಶವೆಂದರೆ ಧೂಮಪಾನ ನಮ್ಮ ಜೀನ್‌ಗಳ ಮೇಲೆ ಅಗಾಧ, ವ್ಯಾಪಕ ಪರಿಣಾಮವನ್ನು ಬೀರುತ್ತದೆ. ಪರೀಕ್ಷೆಗೆ ಒಳಪಟ್ಟ ಎಲ್ಲ ಧೂಮಪಾನಿಗಳ ಹಿಂದಿನ ಹಾಗೂ ಸದ್ಯದ ವಂಶಸ್ಥರ ಡಿಎನ್ಎಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಅದರಿಂದ ತಿಳಿದು ಬಂದ ಒಟ್ಟಾರೆ ಫಲಿತಾಂಶ ಧೂಮಪಾನಿಗಳ ಡಿಎನ್ಎ ಹಂತ ಹಂತವಾಗಿ ಬದಲಾಗುತ್ತ ಬಂದಿರುವುದು.
ಅಮೆರಿಕಾದ ಲಂಗ್ ಅಸೋಶಿಯೇಶನ್ ಮುಖ್ಯಸ್ಥ ಹಿರಿಯ ವೈಜ್ಞಾನಿಕ ಸಲಹೆಗಾರ ಡಾ. ನಾರ್ಮಲ ಎಡಲ್ಮನ್ ಹೇಳುವ ಪ್ರಕಾರ, ಧೂಮಪಾನ ಅನುವಂಶಿಕತೆಯ ಮೇಲೆ ತ್ವರಿತವಾಗಿ ಅಗಾಧ ಪರಿಣಾಮ ಬೀರುತ್ತದೆ. ಮದುವೆಯಾದ ಯುವ ಸಮುದಾಯವಂತೂ ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ತ್ಯಜಿಸಲೇಬೇಕು. ಅದರಲ್ಲಿರುವ ವಿಷಕಾರಿ ಅಂಶ ಡಿಎನ್ಎ ಮೇಲೆ ಬಲವಾಗಿ ದಾಳಿ ನಡೆಸಿ, ಅದರ ಸ್ವರೂಪವನ್ನೇ ಬದಲಾಯಿಸಿ ಬಿಡುತ್ತದೆ. ಕ್ರಮೇಣ ಅನುವಂಶಿಕತೆಯ ಹೆಜ್ಜೆ ಗುರುತನ್ನೇ ಅಳಿಸಿ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಧೂಮಪಾನ ತ್ಯಜಿಸಿದ ಐದು ವರ್ಷಗಳವರೆಗೂ ಅದರ ಪ್ರಭಾವ ಅನುವಂಶಿಕತೆ ಮೇಲೆ ಇರುತ್ತದೆ ಎನ್ನುವುದು ಸಂಶೋಧನಾ ವರದಿಯ ಪ್ರಮುಖ ಅಂಶ.