ವಾಷಿಂಗ್ಟನ್: ಸೋಷಿಯಲ್ ಮೀಡಿಯಾದಲ್ಲಿ ಈಗ ಸಿಖ್ ಸಮುದಾಯದವರಿಂದ ಪೇಟ, ಕಡಗ ಅಭಿಯಾನ ಶುರುವಾಗಿದೆ. ಇದಕ್ಕೆಲ್ಲಾ ರಾಹುಲ್ ಗಾಂಧಿ ಭಾಷಣವೇ ಕಾರಣ.
ಅಮೆರಿಕಾದ ಜಾರ್ಜ್ ಟೌನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ಈಗ ಸಿಖ್ ಸಮುದಾಯದವರು ಪೇಟ, ಕಡಗ ತೊಡಲೂ ಹಿಂಜರಿಯುವ ಭಯದ ವಾತಾವರಣವಿದೆ ಎಂದಿದ್ದರು. ಅವರ ಈ ಹೇಳಿಕೆಗೆ ಸಿಖ್ ಸಮುದಾಯದವರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಿಖ್ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವ ಹರ್ದೀಪ್ ಇದು ಅತ್ಯಂತ ಅಪಾಯಕಾರಿ ಹೇಳಿಕೆ. ನಮ್ಮ ಸಮುದಾಯದ ನಡುವೆ ಧ್ವೇಷದ ಬೀಜ ಬಿತ್ತುವ ಕೆಲಸ ಎಂದಿದ್ದಾರೆ. ನಮ್ಮಸಮುದಾಯದವರು ಅನೇಕರು ಅಮೆರಿಕಾದಲ್ಲಿ ಜೀವನೋಪಾಯಕ್ಕಾಗಿ ನೆಲೆಸಿದ್ದಾರೆ. ಅವರಿಗೆ ಭಾರತದಲ್ಲಿ ಏನಾಗುತ್ತದೆ ಎಂದು ಗೊತ್ತಿಲ್ಲ. ಇಂತಹ ಹೇಳಿಕೆಗಳನ್ನು ನಂಬಿ ದೇಶದ ಬಗ್ಗೆ ಧ್ವೇಷ ಸಾಧಿಸುತ್ತಾರೆ ಎಂದಿದ್ದಾರೆ.
ಇನ್ನು ಸಿಖ್ ಸಮುದಾಯಕ್ಕೆ ಸೇರಿದ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪೇಟ ಮತ್ತು ಕಡಗ ಟ್ರೆಂಡ್ ಶುರು ಮಾಡಿದ್ದಾರೆ. ಪೇಟ ಮತ್ತು ಕಡಗ ಧರಿಸಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುವ ಮೂಲಕ ನಾನು ನನ್ನ ದೇಶದಲ್ಲಿ ನಿರ್ಭೀತನಾಗಿ ಪೇಟ, ಕಡಗವನ್ನು ಧರಿಸುತ್ತಿದ್ದೇನೆ ಎಂದು ಅಭಿಯಾನ ಶುರು ಮಾಡಿದ್ದಾರೆ.