ಇಸ್ಲಾಮಾಬಾದ್ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೋಮವಾರದವರೆಗೆ ಅವಿಶ್ವಾಸದ ಸುಳಿಯಿಂದ ಪಾರಾಗಿದ್ದಾರೆ.
ಪ್ರತಿಪಕ್ಷಗಳ ಸಂಸದರ ಗದ್ದಲ, ಪ್ರತಿಭಟನೆಯ ನಡುವೇ ಪಾಕ್ ಸಂಸತ್ ಕಲಾಪ ಮಾರ್ಚ್ 28ಕ್ಕೆ ಮುಂದೂಡಿಕೆ ಆಗಿದೆ. ಕಲಾಪದಲ್ಲಿ ಮೃತ ಸಂಸದನಿಗೆ ಶೋಕಾಚರಣೆ ಸಲ್ಲಿಸಿ, ಮಾರ್ಚ್ 28ಕ್ಕೆ ಕಲಾಪ ಮುಂದೂಡಿಕೆ ಮಾಡಲಾಯ್ತು.
ಹೀಗಾಗಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗಿಲ್ಲ. ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಸಂಸದ ಖಯಾಲ್ ಜಮಾನ್ ಅವರ ನಿಧನದಿಂದಾಗಿ ಮಾರ್ಚ್ 28 ರಂದು ಸಂಜೆ 4 ಗಂಟೆಗೆ ಅಧಿವೇಶನ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಸಂಸತ್ತಿನ ಸಂಪ್ರದಾಯದ ಪ್ರಕಾರ ಮೊದಲ ಅಧಿವೇಶನವು ಖಯಾಲ್ ಜಮಾನ್ ಅವರಿಗೆ ಗೌರವ ಸಲ್ಲಿಸಲು ಸೀಮಿತವಾಗಿದೆ. ಇಮ್ರಾನ್ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ಪಾಕಿಸ್ತಾನ ಅಳಿವಿನ ಅಂಚಿನತ್ತ ಸಾಗುತ್ತಿದೆ ಮತ್ತು ಹಣದುಬ್ಬರ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯ ಸಲ್ಲಿಸಿದ್ದವು.
ಇದರಿಂದಾಗಿ ಮಾರ್ಚ್ 25ರಂದು ಇಮ್ರಾನ್ಖಾನ್ರನ್ನು ಪದಚ್ಯುತಿಗೊಳಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಇಂದು ಖಯಾಲ್ ಜಮಾನ್ ಅವರ ನಿಧನದ ಕಾರಣದಿಂದಾಗಿ ಸಭೆಯನ್ನು ಮಾರ್ಚ್ 28ಕ್ಕೆ ಮುಂದೂಡಲಾಗಿದೆ.