ಆಮ್ಸ್ಟರ್ಡ್ಯಾಮ್: ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲೊಂದು ಹಳಿಗಳ ನಿರ್ಮಾಣ ಉಪಕರಣಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿರುವ ಘಟನೆ ನೆದರ್ಲ್ಯಾಂಡ್ನಲ್ಲಿ ನಡೆದಿದೆ.
ನೆದರ್ಲ್ಯಾಂಡ್ನ ವೂರ್ಸ್ಕೊಟೆನ್ನಲ್ಲಿ ಈ ಘಟನೆ ನಡೆದಿದ್ದು, ಒಬ್ಬರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 19 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಡಚ್ ತುರ್ತು ಸೇವೆಗಳು ತಿಳಿಸಿವೆ.
ರೈಲು ಸೋಮವಾರ ರಾತ್ರಿ ಲೈಡೆನ್ ನಗರದಿಂದ ಹೇಗ್ಗೆ ಹೊರಟಿತ್ತು. ಮಂಗಳವಾರ ಮುಂಜಾನೆ ಸುಮಾರು 3:25ರ ವೇಳೆಗೆ ರೈಲಿನ ಮುಂಭಾಗ ಹಳಿಗಳ ನಿರ್ಮಾಣಕ್ಕೆಂದು ಇರಿಸಿದ್ದ ಉಪಕರಣಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಅಲ್ಲದೇ ರೈಲಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸಲಾಗಿದೆ ಎಂದು ವರದಿಗಳು ಹೇಳಿವೆ.