ಕಾಶ್ಮಿರದಲ್ಲಿ ಸೇನಾಪಡೆಗಳಿಂದ ಹತನಾದ ಹಿಜ್ಬುಲ್ ಕಮಾಂಡರ್ ಉಗ್ರ ಬುರ್ಹಾನ್ ವನಿಯನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹುತಾತ್ಮ ಎಂದು ಘೋಷಿಸುವ ಮೂಲಕ ಮತ್ತೆ ತಮ್ಮ ಭಾರತ ವಿರೋಧಿ ಧೋರಣೆಯನ್ನು ಮೆರೆದಿದ್ದಾರೆ.
ಕಾಶ್ಮಿರ ಪರಿಸ್ಥಿತಿ ಕುರಿತಂತೆ ಚರ್ಚಿಸಲು ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಷರೀಫ್, ಭಾರತೀಯ ಸೇನಾಪಡೆಗಳು ಕಾಶ್ಮಿರಿಗಳ ಮೇಲೆ ಎಸಗುತ್ತಿರುವ ದೌರ್ಜನ್ಯ ವಿರೋಧಿಸಿ ಜುಲೈ 19 ರಂದು ಕರಾಳ ದಿನಾಚರಣೆ ಆಚರಿಸುವುದಾಗಿ ಘೋಷಿಸಿದ್ದಾರೆ.
ಕಾಶ್ಮಿರಿಗಳ ಪರ ಸಂಪೂರ್ಣ ಪಾಕಿಸ್ತಾನವೇ ನಿಂತಿದೆ. ಪಾಕಿಸ್ತಾನ ಕಾಶ್ಮಿರಿಗಳಿಗೆ ನೈತಿಕ , ರಾಜಕೀಯ ಮತ್ತು ರಾಯಭಾರದ ಬೆಂಬಲ ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮಿರ ವಿಷಯದ ಬಗ್ಗೆ ಬೆಳಕು ಚೆಲ್ಲಿ ಎಂದು ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸೇನಾಪಡೆಗಳು ಕಾಶ್ಮಿರಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಗಮನ ಸೆಳೆಯಲು ಜುಲೈ 19 ರಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಭೆಯ ನಂತರ ಷರೀಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.