Publish Date: Sun, 12 Apr 2026 (10:57 IST)
Updated Date: Sun, 12 Apr 2026 (11:00 IST)
ಇಸ್ಲಾಮಾಬಾದ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಇರಾನ್ ಮತ್ತು ಅಮೆರಿಕಾ ನಡುವಿನ ಶಾಂತಿ ಮಾತುಕತೆ ವಿಫಲವಾಗಿದೆ. ಈ ಬಗ್ಗೆ ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಸುಮಾರು 21 ಗಂಟೆಗಳ ಕಾಲ ಇರಾನ್ ಮತ್ತು ಅಮೆರಿಕಾ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಇಂದು ಮೂರು ಸುತ್ತಿನ ಮಾತುಕತೆ ಮುಗಿದ ಬಳಿಕ ಜೆಡಿ ವ್ಯಾನ್ಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಕಹಿ ಸುದ್ದಿ ಎಂದಿದ್ದಾರೆ.
ಅವರು ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನಾವು ಕೊಂಚ ಹೊಂದಿಕೊಳ್ಳಲು ರೆಡಿ ಇದ್ದೆವು. ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು, ನೀವು ಒಂದು ನಂಬಿಕೆಯೊಂದಿಗೆ ಇಲ್ಲಿಗೆ ಬರಬೇಕು. ಉತ್ತಮ ಒಪ್ಪಂದಕ್ಕೆ ಬರಲು ಅತ್ಯುತ್ತಮ ಪ್ರಯತ್ನ ಪಡಬೇಕು ಎಂದು. ನಾವು ಅದನ್ನು ಮಾಡಿದ್ದೇವೆ. ಆದರೆ ದುರದೃಷ್ಟವಶಾತ್ ನಾವು ಒಪ್ಪಂದಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.
ವಿಶೇಷವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಎಂಬುದು ಅಮೆರಿಕಾದ ಬೇಡಿಕೆಯಾಗಿದೆ. ಆದರೆ ಅದಕ್ಕೆ ಇರಾನ್ ನಿಂದ ಯಾವುದೇ ಬದ್ಧತೆ ಕಂಡುಬರುತ್ತಿಲ್ಲ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ. ಆದರೆ ಮಾತುಕತೆ, ಒಪ್ಪಂದಗಳು ಏನೇ ಇರಲಿ, ಈಗಾಗಲೇ ನಾವು ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನ್ ನ್ ನನ್ನು ಸಂಪೂರ್ಣವಾಗಿ ಸೋಲಿಸಿದ್ದೇವೆ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.