ಅಮೇರಿಕಾದ ನ್ಯೂಯಾರ್ಕ್ ನಗರದ ನಿವಾಸಿಯಾಗಿದ್ದ ಭಾರತೀಯ ಮೂಲದ 9 ವರ್ಷದ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ತನ್ನದೇ ಮನೆಯಲ್ಲಿ ಶವವಾಗಿ ಪತ್ತೆಯಾದ ದಾರುಣ ಘಟನೆ ನಡೆದಿದೆ. ಮೃತಳನ್ನು ಅಶ್‌ದೀಪ್ ಕೌರ್ ಎಂದು ಗುರುತಿಸಲಾಗಿದ್ದು ಮಲತಾಯಿಯಿಂದಲೇ ಆಕೆ ಕೊಲೆಯಾಗಿದ್ದಾಳೆ ಎಂದು ಶಂಕಿಸಲಾಗಿದೆ.
ಕೇವಲ 3 ತಿಂಗಳ ಹಿಂದೆ ಕೌರ್ ತನ್ನ ತಂದೆ ಸುಖ್‌ಜಿಂದರ್ ಸಿಂಗ್ ಮತ್ತು ಮಲತಾಯಿ ಅರ್ಜುನ್ ಸಮ್ಧಿ ಪರ್ದಾಸ್ (55) ಜತೆ ಅಮೇರಿಕಕ್ಕೆ ತೆರಳಿದ್ದಳು. ಇನ್ನೊಂದು ದಂಪತಿಯ ಜತೆ ಫ್ಲಾಟ್ ಶೇರ್ ಮಾಡಿಕೊಂಡು ಕುಟುಂಬ ನ್ಯೂಯಾರ್ಕ್‌ನಲ್ಲಿ ವಾಸವಾಗಿತ್ತು.
ಶುಕ್ರವಾರ ಬಾಲಕಿ ತನ್ನ ಮನೆಯ ಬಾತ್ ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು ಆಕೆಯ ಮೂಗಿನ ಮೇಲೆ ಗಾಯದ ಗುರುತುಗಳಿವೆ. ಮಲತಾಯಿಯ ಉಸಿರುಗಟ್ಟಿಸಿ ಕೊಲೆಗೈದಿರಬಹುದೆಂಬ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ.
ಅದೇ ಮನೆಯಲ್ಲಿ ವಾಸವಿದ್ದ ಹೌಸ್‌ಮೇಟ್ ತನ್ನ ಮಲತಾಯಿ ಜತೆ ಬಾತ್ ರೂಮ್‌ಗೆ ಹೋಗುತ್ತಿರುವುದನ್ನು ಕಂಡಿದ್ದಳು. ಸ್ವಲ್ಪ ಸಮಯದ ಬಳಿಕ ಆಕೆ ಅಲ್ಲಿಂದ ಒಬ್ಬಳೇ ಹೊರಬಂದಿದ್ದು ಮನೆಯಿಂದ ಹೊರಗೆ ಹೋಗಿದ್ದಾಳೆ. ಹೋಗುವಾಗ ಅಶ್‌ದೀಪ್ ಎಲ್ಲಿ ಎಂದು ಕೇಳಿದ್ದಕ್ಕೆ ಆಕೆ ಸ್ನಾನ ಮಾಡುತ್ತಿದ್ದಾಳೆ ಎಂದು ಹೇಳಿದ್ದಾಳೆ. ಇವೆಲ್ಲ ಆಕೆಯೇ ಹತ್ಯೆ ಮಾಡಿರಬಹುದೆಂಬುದನ್ನು ಪುಷ್ಠೀಕರಿಸಿವೆ.
ಎಷ್ಟು ಹೊತ್ತಾದರೂ ಬಾಲಕಿ ಹೊರಬರದಿದ್ದಾಗ ಹೌಸ್‌ಮೇಟ್ ಒಳಗೆ ಹೋಗಿ ನೋಡಿದ್ದಾಳೆ. ಅಲ್ಲಿನ ಬಾತ್ ಟಬ್‌ನಲ್ಲಿ ಬಾಲಕಿ ಉಸಿರಿಲ್ಲದೇ ಬಿದ್ದಿದ್ದನ್ನು ಕಂಡು ಆಕೆ ಆಘಾತಗೊಂಡಿದ್ದಾಳೆ. ಆಕೆ ಸತ್ತು ಹಲವು ಗಂಟೆಗಳಾದರೂ ಮಲತಾಯಿ ಮಾತ್ರ ಪತ್ತೆಯೇ ಇರಲಿಲ್ಲ. ಶೋಧ ನಡೆಸಿದ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದ್ದಾರೆ.
ಬಾಲಕಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸಿದ್ದ ಪರ್ದಾಸ್ ಸದಾ ಆಕೆಗೆ ಹಿಂಸೆ ನೀಡುತ್ತಿದ್ದಳು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ನನಗೆ ಆಕೆಯ ಜತೆ ಇರಲು ಇಷ್ಟವಿಲ್ಲ. ಹೊಡೆಯುತ್ತಾಳೆ ಎಂದು ಮಗು ಎಂದು ಮಗು ಹೇಳುತ್ತಿತ್ತು ಎಂದು ಮೃತಳ ಚಿಕ್ಕಪ್ಪ ದೂರಿದ್ದಾರೆ.